ಸಾರಿಕ ಶೋಭಾ ವಿನಾಯಕ ಅವರು ಮೂಲತಃ ದಾವಣಗೆರೆ ಹತ್ತಿರದ ಹರಪನಹಳ್ಳಿಯವರು. ದಾವಣಗೆರೆಯಲ್ಲಿ ಬಿ.ಇ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದು, ಸುಮಾರು 20 ವರ್ಷಗಳ ಖಾಸಗಿ ಕಂಪನಿಯಲ್ಲಿಯ ಕೆಲಸದ ಅನುಭವಿದೆ. ಈಗಲೂ ಪ್ರತಿಷ್ಟಿತ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಉದ್ಯೋಗದ ಜೊತೆಗೆ ಸಾಹಿತ್ಯ ಕೃಷಿ, ಕನ್ನಡ, ಕನ್ನಡ ಸಂಘಟನೆಗಳೊಂದಿಗೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶಿಕ್ಷಣ ಮತ್ತು ವೃತ್ತಿ ವಲಯಗಳು ಸಾಹಿತ್ಯಕ್ಕೆ ಸಂಬಂಧ ಪಟ್ಟಿಲ್ಲದಿದ್ದರೂ ಸಾರಿಕ ಅವರು ಸ್ವಂತ ಆಸಕ್ತಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ. ಇವರ ಸಾಂಸ್ಕೃತಿಕ ಅರಿವು ಪ್ರಶಂಸನೀಯವಾಗಿದ್ದು, ಕನ್ನಡ ಭಾಷೆಯ ಬದ್ಧತೆಯಿಂದ ಕ್ರೀಯಾಶೀಲರಾಗಿರುವುದು ಮತ್ತೊಂದು ವಿಶೇಷ. ಕರ್ನಾಟಕದಲ್ಲಿ ಕನ್ನಡವು ಎಲ್ಲಾ ಕ್ಷೇತ್ರಗಳಲ್ಲೂ ಆದ್ಯತೆ ಪಡೆಯಬೇಕೆಂಬ ಕಾಳಜಿಯಿಂದ ಇವರು ತಮ್ಮ ಬಳಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಜನಮನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅನಿಸಿದ್ದನ್ನು ಗೀಚುವುದು ಇವರ ಇಷ್ಟದ ಹವ್ಯಾಸ. ಹೀಗೆ ಹವ್ಯಾಸವಾಗಿ ಬರೆದ ಸಾಲುಗಳು ಮೊದಲ ಕವನ ಮತ್ತು ಚುಟುಕುಗಳ "ಬೆಳಕ ಬೆನ್ನ ಹಿಂದೆ" ಪುಸ್ತಕವಾಗಿ ಪ್ರಕಟವಾಗಿದೆ.