ಸ.ವೆಂ.ಪೂರ್ಣಿಮಾ ಮೂಲತಃ ಜನಪದ ಗಾಯಕಿ. ಬಾಲ್ಯದಲ್ಲಿಯೇ, ತಮ್ಮ ತಂದೆಯ ಆಪ್ತರಾಗಿದ್ದ ಎಸ್ ಕೆ ಕರೀಂಖಾನ್ ರವರ ಪ್ರಭಾವಕ್ಕೆ ಒಳಗಾಗಿದ್ದರು. ನೆಲಮೂಲ ಸಂಸ್ಕೃತಿಯ ಬಗೆಗೆ ಅವರಿಗೆ ಅಪಾರ ಒಲವು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯವನ್ನು ಅಭ್ಯಾಸ ಮಾಡಿದರು. ಜೊತೆಗೆ ಗಮಕ ಕಲೆಯನ್ನೂ ಕರಗತ ಮಾಡಿಕೊಂಡರು. ಇವರು ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಬರಹಗಳು ಅನೇಕ ಜಿಲ್ಲಾ ಮತ್ತು ರಾಜ್ಯಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅನೇಕ ಸಂಘ ಸಂಸ್ಥೆಗಳ ಒಡನಾಟವಿದೆ. ಸಕಲೇಶಪುರದ ಸಂವಹನ ವೇದಿಕೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ "ಜನಪದ ಸಂವಹನ" ಎಂಬ ಕಲಾತಂಡವನ್ನು ಕಟ್ಟಿಕೊಂಡು ರಾಜ್ಯದ ಮೂಲೆ ಮೂಲೆಯಲ್ಲಿ ಜನಪದ ಗೀತೆಗಳು ಹಾಡುವುದರ ಜೊತೆಗೆ ಜನಪದ ಗೀತೆಗಳ ಸಂಗ್ರಹದಲ್ಲಿಯೂ ತೊಡಗಿದ್ದರು.