About the Author

 

ಕನ್ನಡ ಚಲನಚಿತ್ರ ರಂಗದ ಪ್ರಸಿದ್ಧ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ’ಪ್ರಜಾವಾಣಿ’ಯಲ್ಲಿ ಅಂಕಣ ರೂಪದಲ್ಲಿ ಬರೆದು ಪ್ರಕಟಿಸಿದ್ದರು. ಅವರ ’ ನೂರೊಂದು ನೆನಪು’ ಪುಸ್ತಕವಾಗಿ ಪ್ರಕಟವಾಗಿದೆ. ಕರ್ನಾಟಕ  ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.   

ರಾಜೇಂದ್ರಸಿಂಗ್‌ ಬಾಬು ಅವರು ಜನಿಸಿದ್ದು 1952 ಅಕ್ಟೋಬರ್ 22ರಂದು ತಂದೆ ಹೆಸರಾಂತ ನಿರ್ಮಾಪಕ ಎಸ್. ವಿ. ಶಂಕರಸಿಂಗ್, ತಾಯಿ ನಟಿ ಪ್ರತಿಮಾದೇವಿ.

ಶಂಕರ್ ಸಿಂಗ್ ಅವರ ಗೆಳೆಯ ಬಿ. ವಿಠ್ಠಲಾಚಾರ್ಯ ಅವರು ಆರಂಭಿಸಿದ ‘ಮಹಾತ್ಮ ಪಿಕ್ಚರ್ಸ್’ (1946) ರಾಜೇಂದ್ರಸಿಂಗ್ ನೇತೃತ್ವದಲ್ಲಿ ಮುನ್ನಡೆದಿದೆ. ಸಿನಿಮಾ ವಾತಾವರಣದಲ್ಲಿ ಬೆಳೆದ ಅವರು ಮುಂದೆ ಸಿನಿಮಾ ನಿರ್ಮಾಣ, ನಿರ್ದೇಶನಗಳ ಮೂಲಕ ತಂದೆಯವರ ಕಾಯಕ ಮುಂದುವರೆಸಿದರು. ಅಜ್ಞಾತ ಸ್ಥಳಗಳಿಗೆ ಕ್ಯಾಮೆರಾ ಹೊತ್ತು ತಿರುಗುತ್ತಿದ್ದ ಬಾಬು ಸುಧಾ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಹಲವಾರು ಸುಂದರ ಸಚಿತ್ರ ಲೇಖನ ಬರೆದು ಪ್ರಕಟಿಸಿದ್ದಾರೆ. ‘ನಾಗಕನ್ಯೆ’ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಬಾಬು ಮುಂದೆ  ‘ನಾಗರ ಹೊಳೆ’, ‘ಕಿಲಾಡಿ ಜೋಡಿ’, ‘ಬಂಧನ’, ‘ಅಂತ’, ‘ಭರ್ಜರಿ ಭೇಟೆ’, ‘ಮುತ್ತಿನ ಹಾರ’, ‘ಮುಂಗಾರಿನ ಮಿಂಚು’, ‘ಸಿಂಹದ ಮರಿ ಸೈನ್ಯ’, ‘ಹೂವು ಹಣ್ಣು’, ‘ಹಿಮ ಪಾತ’, ‘ಮಹಾ ಕ್ಷತ್ರಿಯ’, ‘ಹಿಮಪಾತ’ ಮುಂತಾದ ಚಿತ್ರಗಳನ್ನು ಕನ್ನಡದಲ್ಲಿ ನಿರ್ಮಿಸಿ ನಿರ್ದೇಶಿಸಿದರು.

 ಕನ್ನಡದಲ್ಲಿ ಸುಮಾರು 35 ಚಿತ್ರಗಳು, ಹಿಂದಿಯಲ್ಲಿ 8, ತೆಲುಗಿನಲ್ಲಿ 7 ಚಿತ್ರಗಳನ್ನು ಬಾಬು ಮಾಡಿದ್ದಾರೆ.  ಬಾಂಡ್ ಶೈಲಿಯ ಚಿತ್ರ, ಮಕ್ಕಳ ಚಿತ್ರ, ಸಾಂಸಾರಿಕ ಚಿತ್ರಗಳಲ್ಲಿ ತಯಾರಿಸಿರುವ ಬಾಬು ತಾನು ಹಾಸ್ಯ ಚಿತ್ರಗಳನ್ನೂ ನಿರ್ದೇಶಿಸಬಲ್ಲೆ ಎಂದು ‘ಕುರಿಗಳು ಸಾರ್ ಕುರಿಗಳು’, ‘ಕೋತಿಗಳು ಸಾರ್ ಕೋತಿಗಳು’, ‘ಕತ್ತೆಗಳು ಸಾರ್ ಕತ್ತೆ’ಗಳು ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ.

 

ಎಸ್. ವಿ. ರಾಜೇಂದ್ರಸಿಂಗ್ ಬಾಬು

(22 Oct 1952)