ಎಸ್.ಪಿ.ಪಾಟೀಲರು ಹುಟ್ಟಿದ್ದು ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯಲ್ಲಿ. ತಂದೆ-ಪೀರಗೌಡ ಧರ್ಮಗೌಡ ಪಾಟೀಲ, ತಾಯಿ- ಪದ್ಮಾವತಿ. ಪ್ರಾಥಮಿಕ ವಿದ್ಯಾಭ್ಯಾಸ ಶೇಡಬಾಳ, ಕಾಲೇಜು ಕಲಿತದ್ದು ಸಾಂಗಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಬಿ.ಎ. ಮತ್ತು ಶ್ರೀ ರಂ.ಶ್ರೀ ಮುಗಳಿ ಅವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪೂರ್ಣಗೊಳಿಸಿದರು. ಆನಂತರ ‘ಚಾವುಂಡರಾಯ ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ನಂತರ ಉದ್ಯೋಗ ಪ್ರಾರಂಭಿಸಿದ್ದು ಶೇಡಬಾಳ ಸನ್ಮತಿ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ. ಕಾಮರ್ಸ್ ಕಾಲೇಜಿನ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ, ಆಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ಜೈನ ಶಾಸ್ತ್ರ ಪ್ರಾಧ್ಯಾಪಕರಾಗಿ ಹೀಗೆ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಆ.ನೇ.ಉಪಾಧ್ಯೆ ಪ್ರಾಕೃತ ಮತ್ತು ಜೈನಶಾಸ್ತ್ರ ಅಧ್ಯಯನ ಕೇಂದ್ರ ನಿರ್ದೇಶಕರು ಮತ್ತು ಜೈನ ಮಾಸಪತ್ರಿಕೆ ‘ಪ್ರಗತಿ ಮತ್ತು ಜನ ವಿಜಯ’ ಮಾಸಪತ್ರಿಕೆಯ ಸಂಪಾದಕರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಸುಮಾರು ಏಳು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ನಾಲ್ಕು ವಿದ್ಯಾರ್ಥಿಗಳಿಗೆ ಎಂ.ಫಿಲ್ ಮಾರ್ಗದರ್ಶನ ಮಾಡಿದ್ದಾರೆ. ಹಲವಾರು ವಿಚಾರ ಸಂಕಿರಣ, ಕಮ್ಮಟ, ದತ್ತಿ ಉಪನ್ಯಾಸಗಳಲ್ಲಿ ಭಾಗಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ-ಅಖಿಲ ಭಾರತ ವರ್ಷಿಯ ದಿಗಂಬರಶಾಸ್ತ್ರಿ ಪರಿಷತ್, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ, ಕರ್ನಾಟಕ ಸರಕಾರದ ಪಠ್ಯಪುಸ್ತಕ ಸಮಿತಿ, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ, ನ್ಯಾಷನಲ್ ಬುಕ್‌ಟ್ರಸ್ಟ್, ವಿಶ್ವವಿದ್ಯಾಲಯಗಳ ಜೈನಶಾಸ್ತ್ರ ಅಧ್ಯಯನ ಕೇಂದ್ರ ಮುಂತಾದುವುಗಳಲ್ಲಿ ಜವಾಬ್ದಾರಿಯುತ ಹುದ್ದೆ ಅಲಂಕರಿಸಿದ್ದಾರೆ.
‘ಜೈನ ಸಂಸ್ಕೃತಿಯ ಹಬ್ಬಗಳು’, ‘ಕವಿ ಬ್ರಹ್ಮಶಿವ’, ‘ಆದಿನಾಥ’, ‘ಜೈನ ಸಾಹಿತ್ಯ ಸಂಸ್ಕೃತಿ’, ‘ಜೈನದರ್ಶನ’, ‘ಜಿನವಾಣಿ ಚಿಂತನ’, ‘ಪೂರ್ವ ಪುರಾಣ’, ‘ಧ್ವನಿ’, ‘ಅಜಿತಪುರಾಣಸಾರ’, ‘ಸಿದ್ಧಶೇಷೆ’, ‘ಬಾಂಧವ್ಯ’, ‘ರಯಣಸಾರ’, ‘ದಾನಚಿಂತಾಮಣಿ ಅತ್ತಿಮಬ್ಬೆ’, ‘ಜಿನಮಾಣಿಕ್ಯ’, ‘ಆಧುನಿಕ ಕನ್ನಡ ಜೈನ ಲೇಖಕರು ಮುಂತಾದ ಸ್ವತಂತ್ರ-ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾವೀರ ಭಕ್ತಿಗಂಗಾ, ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಹೆಣ್ಣು, ಅತಿಥಿ, ಬಾಡದ ಹೂ, ಮಹಿಳೆಯರ ಮರಾಠಿ ಕಥೆಗಳು ಮುಂತಾದ ಅನುವಾದಗಳನ್ನೊಳಗೊಂಡು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸಾಹಿತ್ಯ ಕ್ಷೇತ್ರದ ಕೃಷಿಗಾಗಿ ಸಿದ್ಧಶೇಷೆ, ರಾಷ್ಟ್ರೀಯ ಭಾವೈಕ್ಯ : ಜೈನಧರ್ಮ ಕೃತಿಗೆ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಪ್ರಶಸ್ತಿ, ಕನ್ನಡ ಮರಾಠಿ ಬಾಂಧವ್ಯಕ್ಕೆ ಶ್ರೀ ವರದರಾಜ ಆದ್ಯ ಪ್ರಶಸ್ತಿ, ಜೈನ ಸಾಹಿತ್ಯ, ಸಂಸ್ಕೃತಿ ಸೇವೆಗೆ ಶ್ರೀ ಗೋಮಟೇಶ್ವರ ಪ್ರಶಸ್ತಿ, ಆಚಾರ‍್ಯ ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ, ಕ.ಸಾ.ಪ.ದ ಚಾವುಂಡರಾಯ ಪ್ರಶಸ್ತಿ, ಡಾ. ಆ.ನೇ. ಉಪಾಧ್ಯೆ ಸಾಹಿತ್ಯ ಸಂಶೋಧನ ಪ್ರಶಸ್ತಿ, ಆನಂದಕಂದ ಪ್ರಶಸ್ತಿ ಸೇರಿದಂತೆ ಹಲವು ಗೌರವ- ಪ್ರಶಸ್ತಿಗಳು ಸಂದಿವೆ.