ರೂಪಶ್ರೀ ಕಲ್ಲಿಗನೂರ್ ಅವರು ಜನಿಸಿದ್ದು 1989 ರಲ್ಲಿ. ಬೆಂಗಳೂರಿನ ಕಲಾಮಂದಿರ ಕಲಾಶಾಲೆಯಲ್ಲಿ ಪದವಿ ಪಡೆದು, ಪ್ರಸ್ತುತ ಮೈಸೂರಿನ ಕಲಾಶಾಲೆಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಜಾವಾಣಿಯಲ್ಲಿ ಕಲಾವಿದೆಯಾಗಿ ಹಾಗೂ ಟ್ರಯೋ ವರ್ಲ್ಡ್ ಶಾಲೆಯಲ್ಲಿ ಕಲಾಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವವಿದೆ. ಇಲ್ಲಸ್ಟ್ರೇಷನ್ ಹಾಗೂ ಚಿತ್ರಕಲಾವಿದೆಯಾಗಿ ಕಾರ್ಯನಿರ್ವಹಿಸುತ್ತಿರುವ ರೂಪಶ್ರೀ ಪ್ರಜಾವಾಣಿ ಪತ್ರಿಕೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಬರೆಯುತ್ತಿರುತ್ತಾರೆ. ಈ ಮೊದಲು ’ಕಾಡೊಳಗ ಕಳದಾವು ಮಕ್ಕಾಳು' ಎಂಬ ಮಕ್ಕಳ ನಾಟಕ ಕೃತಿಯನ್ನು ಪ್ರಕಟಿಸಿದ್ದರು. ಮೊದಲ ಪ್ರಕಟಿತ ಕೃತಿಗೇ ಕನ್ನಡ ಸಾಹಿತ್ಯ ಪರಿಷತ್ತಿನ ಬಿಬಿಎಂಪಿ ಅರಳು ಸಾಹಿತ್ಯ ಪ್ರಶಸ್ತಿ ದೊರೆತಿದೆ. ಹಲವು ಸಂಸ್ಥೆಗಳು ಏರ್ಪಡಿಸಿದ ಚಿತ್ರಕಲಾ ಪ್ರದರ್ಶನದಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.