ರೂಮಿ ಹರೀಶ್ ಒಬ್ಬ ಟ್ರಾನ್ಸ್ ಜೆಂಡರ್ ಕ್ವಿಯರ್ ಮ್ಯಾನ್ (ಹೆಣ್ಣಾಗಿ ಹುಟ್ಟಿ ಶಸ್ತ್ರ ಚಿಕಿತ್ಸೆ ಪಡೆದು ಗಂಡಸಾಗಿರುವವರು). ಚಿಕ್ಕವಯಸ್ಸಿನಲ್ಲಿಯೇ ಹಿಂದುಸ್ಥಾನಿ ಸಂಗೀತವನ್ನು ಕಲಿಯಲು ಶುರು ಮಾಡಿ ಮೂವತ್ತು ವರ್ಷಗಳಲ್ಲಿ 7 ಗುರುಗಳ ಹತ್ತಿರ ಕಲಿತಿದ್ದು ದೇಶ ವಿದೇಶಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಂಗೀತ ಸಂಯೋಜನೆ, ಚಿತ್ರ ಬಿಡಿಸುವುದು ಮತ್ತು ಬರೆಯುವ ಅಭ್ಯಾಸವನ್ನೂ ಕರಗತ ಮಾಡಿಕೊಂಡಿದ್ದಾರೆ. ಲೈಂಗಿಕತೆ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರ ಜೊತೆ ಅವರ ಸಾಮಾಜಿಕ ನ್ಯಾಯಕ್ಕಾಗಿ ಕಳೆದ 24 ವರ್ಷಗಳಿಂದ ಸತತವಾಗಿ ಕೆಲಸ ಮಾಡುತ್ತಿದ್ದು, ಈಚೆಗೆ ಕ್ವಿಯರ್ ಮತ್ತು ಟ್ರಾನ್ಸ್ ಸಮುದಾಯದ ಕಲೆಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಲೈಂಗಿಕತೆ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರ ಬಿಕ್ಕಟ್ಟು ಪರಿಸ್ಥಿತಿಗಳಲ್ಲಿ ಅವರನ್ನು ಅದರಿಂದ ಪಾರುಮಾಡಿದ್ದು ಸುಮಾರು 900ಗೂ ಹೆಚ್ಚು ಸಮುದಾಯದವರಿಗೆ ಕೆಲಸ ಮಾಡಿದ್ದಾರೆ. ಅದಲ್ಲದೇ ಲೈಂಗಿಕ ಕಾರ್ಮಿಕರು, ಪೌರಕಾರ್ಮಿಕರು ಹೀಗೆ ಅಂಚಿಗೆ ದೂಡಲ್ಪಟ್ಟ ಹಲವಾರು ಸಮುದಾಯಗಳ ಜೊತೆ ಕೆಲಸ ಮಾಡಿದ್ದಾರೆ. ಅವರು ಮೂರು ನಾಟಕಗಳನ್ನು ಬರೆದು ಅದನ್ನು ಪ್ರದರ್ಶಿಸಲಾಗಿದೆ. ಅಗ್ನಿ ಪತ್ರಿಕೆ, ಕನ್ನಡ ಪ್ರಭ, ಈದಿನ ಡಾಟ್ ಕಾಮ್, ಟಿವಿ9ಗೆ, ಅಂಕಣ ಬರೆದಿದ್ದು, ಈಗ ಪ್ಲಾನೆಟ್ ಕನ್ನಡಗೆ ಅಂಕಣ ಬರೆಯುತ್ತಿದ್ದಾರೆ. ಅವರ ಕವನ ಎರಡು ಕ್ವಿಯರ್ ಅಂಥಾಲಜಿಯಲ್ಲಿ ಪ್ರಕಟಿತವಾಗಿದೆ. ಅವರ ಜೀವನಧಾರಿತ ಅನುಭವಗಳನ್ನು ಹಿಡಿದಿಟ್ಟು ಜೋನ್ಪುರಿ ಖಯಾಲ್ ಎಂಬ ಪುಸ್ತಕ ಅಹರ್ನಿಶಿ ಪ್ರಕಾಶನ ಪ್ರಕಟವಾಗಿದ್ದು ದಾದಾಪೀರ್ ಜೈಮನ್ ಬರೆದಿದ್ದಾರೆ. ಪ್ರಸ್ತುತ ಅವರು ಪರ್ಯಾಯ ಕಾನೂನು ವೇದಿಕೆಯಲ್ಲಿ ರಿಸರ್ಚ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.