About the Author

ಕವಿ, ನಾಟಕಕಾರ ರಘುನಂದನ ವೃತ್ತಿನಿರತ ನಿರ್ದೇಶಕ, ರಂಗಕಲೆಯ ಅಧ್ಯಾಪಕರು. ಸಮುದಾಯ ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ತೊಡಗಿಕೊಂಡಿದ್ದು, ಕನ್ನಡ ನಾಡಿನ ಉದ್ದಗಲ ಕೆಲಸಮಾಡಿದ್ದಾರೆ. ಬಳಿಕ ಮೈಸೂರಿನ ರಂಗಾಯಣದಲ್ಲಿ, ಅದು ಆರಂಭಗೊಂಡಾಗಿ ನಿಂದ ತೊಡಗಿ, ಹನ್ನೆರಡು ವರ್ಷಗಳ ಕಾಲ ಅಭಿನಯ ಶಿಕ್ಷಕರಾಗಿದ್ದರಲ್ಲದೆ, ಆ ಸಂಸ್ಥೆಯದೇ ನಾಟಕಕಾರರಾಗಿದ್ದರು. ಅಲ್ಲಿನ ರಂಗನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಹಲವು ದಶಕಗಳಿಂದ ನೀನಾಸಮ್ ಸಂಸ್ಥೆಯ ಒಡನಾಡಿ ಆಗಿದ್ದು, ಸಂಸ್ಥೆ ನಡೆಸುವ ರಂಗಶಿಕ್ಷಣ ಕೇಂದ್ರದಲ್ಲಿಯೂ, ತಿರುಗಾಟ ತಂಡದಲ್ಲಿಯೂ ಅಧ್ಯಾಪನ, ರಂಗನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ, ಮತ್ತು ತ್ರಿಶ್ಶೂರ್ ನಾಟಕ ಶಾಲೆ, ಕೇರಳ-ಇವುಗಳಿಂದ ಮೊದಲುಗೊಂಡು ಹಲವು ಸಂಸ್ಥೆಗಳಲ್ಲಿ ಅನೇಕ ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿ, ರಂಗನಿರ್ದೇಶಕರಾಗಿ ಕೆಲಸಮಾಡಿದ್ದಾರೆ. ಇವರು ಪದ್ಯರೂಪ ಕೊಟ್ಟು ಕನ್ನಡಕ್ಕೆ ತಂದ ನಾಟಕಗಳು, ಕಾಳಿದಾಸನ ಶಾಕುಂತಲ, ಭಾಸನ ಪ್ರತಿಮಾನಾಟಕ, ಯೂರಿಪಿಡೀಸನ ಹಿಪ್ಪೋಲಿಟಸ್, ಇಬೆನ್ಸ್ ನ ಪಿಯರ್ ಗ್ಯುಂಟ್ ಮತ್ತು ಎನ್ ಎನಿಮಿ ಆಫ್ ದ ಪೀಪಲ್, ಇತ್ಯಾದಿ.

ರಘುನಂದನ ಅವರ ಕೊಡುಗೆಯನ್ನು ಗಮನಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2018ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಕೋಮುದ್ವೇಷ, ವಿದ್ಯಾರ್ಥಿಗಳ ಮೇಲಿನ ಹಲ್ಲೆ-ದಾಳಿಗಳ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು. ನಿರಾಕರಿಸುವ ಸಂದರ್ಭದಲ್ಲಿ ’ಇದು ಪ್ರತಿಭಟನೆಯಲ್ಲ; ವ್ಯಥೆ; ಸ್ವೀಕರಿಸಲಾಗದ ಅಸಹಾಯಕತೆ’ ಎಂದು ಅಭಿಪ್ರಾಯಪಟ್ಟಿದ್ದರು.

ಕೃತಿಗಳು: ತುಯ್ತವೆಲ್ಲ ನವ್ಯದತ್ತ.. ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ, ನಾನು ಸತ್ತ ಮೇಲೆ

ರಘುನಂದನ