ಹಿರಿಯ ಸಾಹಿತಿ ಪಾದೂರು ಶ್ರೀಪತಿ ತಂತ್ರಿ ಅವರು ಸಮಾಜ ಶಾಸ್ತ್ರಜ್ಞರು. ಮೂಲತಃ ಉಡುಪಿಯವರು. ಮಹಾಭಾರತದ ಪಾತ್ರಗಳನ್ನು ಅತ್ಯಂತ ಪಾಂಡಿತ್ಯಪೂರ್ಣವಾಗಿ ವಿಶ್ಲೇಷಿಸಿದ ಇರಾವತಿ ಕರ್ವೆ ಅವರ ಕೃತಿಯನ್ನು ಯುಗಾಂತ ಶೀರ್ಷಿಕೆಯಡಿ ಅನುವಾದಿಸಿ ಕನ್ನಡಕ್ಕೆ ಒಂದು ಶಾಸ್ತ್ರೀಯ ಕೃತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕುಂದಾಪುರ ಭಂಡಾರ್‌ಕಾರ್ ಕಾಲೇಜು, ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ, ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜು ಮತ್ತು ಮಣಿಪಾಲದ ಮಾಧವ ಪೈ ಕಾಲೇಜಿನಲ್ಲಿ ಪ್ರಾಂಶು ಪಾಲರಾಗಿದ್ದರು. ಮಣಿಪಾಲ ಕೆಎಂಸಿಯಲ್ಲಿಯೂ ಉಪನ್ಯಾಸಕರಾಗಿದ್ದರು. ಮಂಗಳೂರು, ಮೈಸೂರು ವಿ.ವಿ. ಸೆನೆಟ್ ಸದಸ್ಯರಾಗಿ, ಮಂಗಳೂರು ವಿ.ವಿ. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾಗಿ, ವಿ.ವಿ. ಅನುದಾನ ಆಯೋಗದ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ಮಂಗಳೂರು ವಿವಿ ಸ್ಥಾಪನೆಯಲ್ಲೂ ಅವರು ಶ್ರಮಿಸಿದ್ದಾರೆ. ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಭಾರತೀಯ ದರ್ಶನ ಪ್ರಕಾರಗಳು, ವಾಸ್ತು, ಆಗಮ, ವಿಗ್ರಹಶಾಸ್ತ್ರ, ಜಾಗತಿಕ ಧರ್ಮಗಳ ತುಲನಾತ್ಮಕ ವಿಮರ್ಶೆ, ಉನ್ನತ ಶಿಕ್ಷಣ ಹೀಗೆ ಅನೇಕ ವಿಷಯಗಳ ಬಗೆಗೆ ಸುಮಾರು 200 ಲೇಖನಗಳನ್ನು ಪ್ರಕಟಿಸಿದ್ದಾರೆ. ಸೃಷ್ಟಿ ಪ್ರಲಯ ಮರುಸೃಷ್ಟಿ ಸೇರಿದಂತೆ ಇತರೆ ಕೃತಿಗಳನ್ನು ರಚಿಸಿದ್ದಾರೆ.