About the Author

ಪಿ.ಶೇಷಾದ್ರಿ ಕನ್ನಡ ಚಲನಚಿತ್ರಗಳ ಪ್ರಮುಖ ನಿರ್ದೇಶಕ. ಕನ್ನಡ ಚಲನಚಿತ್ರ ರಂಗದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿ ಸತತ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಲೇ ಕನ್ನಡ ಭಾಷೆಯಲ್ಲಿ ಎಂ.ಎ. ಪದವಿಯನ್ನು, ಬರವಣಿಗೆಯಲ್ಲಿ ಆಸಕ್ತಿ ಇದ್ದುದರಿಂದ ಪತ್ರಕರ್ತನಾಗುವ ಬಯಕೆಯಿಂದ ಮೈಸೂರು ವಿಶ್ವವಿದ್ಯಾಲಯದಿಂದ ಜರ್ನಲಿಸಂನಲ್ಲಿ ಡಿಪ್ಲೊಮ ಕೂಡ ಪಡೆದರು. ತಮ್ಮ ವೃತ್ತಿ ಜೀವನವನ್ನು  ‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ಪತ್ರಕರ್ತನಾಗಿ ಆರಂಭಿಸಿ, ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದರು.

1985 ರಿಂದ ಸ್ವತಂತ್ರವಾಗಿ ದೂರದರ್ಶನ ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದರು. ಆ ಸಂದರ್ಭದಲ್ಲಿ ಟಿ.ಎನ್.ಸೀತಾರಾಮ್ ಹಾಗೂ ನಾಗೇಂದ್ರ ಶಾ ಜೊತೆಗೂಡಿ ನಿರ್ದೇಶಿಸಿದ ‘ಕತೆಗಾರ’ ಧಾರಾವಾಹಿ ಕನ್ನಡದ ಸಣ್ಣಕತೆಗಳ ಇತಿಹಾಸವನ್ನು ಹೇಳುವ ಒಂದು ಮಹತ್ವದ ದೃಶ್ಯಮಾಲಿಕೆಯಾಗಿ ಹೊರಹೊಮ್ಮಿತು. ಇವರ ‘‘ಮಾಯಾಮೃಗ’’ ಕನ್ನಡ ಧಾರಾವಾಹಿಗಳ ಮಟ್ಟಿಗೆ ಹೊಸ ದಾಖಲೆಯನ್ನೇ ಬರೆಯಿತು.  2000ನೇ ಇಸವಿಯಲ್ಲಿ ಮುನ್ನುಡಿ ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ಶೇಷಾದ್ರಿ ಅವರಿಗೆ ಇವರ ಮೊದಲ ಚಿತ್ರವೇ ರಾಷ್ಟ್ರಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ನಂತರದಲ್ಲಿ ‘ಅತಿಥಿ’(2001), ‘ಬೇರು’(2004), ‘ತುತ್ತೂರಿ’(2005), ‘ವಿಮುಕ್ತಿ’ (2008) ಮತ್ತು ‘ಬೆಟ್ಟದ ಜೀವ (2010), ‘ಭಾರತ್ ಸ್ಟೋರ್ಸ್’ (2012), ಮೂಕಜ್ಜಿಯ ಕನಸುಗಳು(2018), ಮೋಹನದಾಸ(20190 ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಅಷ್ಟೇಅಲ್ಲದೆ ಟಿವಿ ಧಾರವಾಹಿಗಳಾದ ಇಂಚರ (1995)ಕಾಮನಬಿಲ್ಲು (1996)ಕಥೆಗಾರ (1996-1997)ಮಾಯಮೃಗ (1999-2000)ನಿಕ್ಷೇಪ (2000-2001)ಕಣ್ಣಾಮುಚ್ಚಾಲೆ (2001-2002)ಉಯ್ಯಾಲೆ (2003)ಸುಬ್ಬಣ್ಣ (2003-2004)ಮೌನರಾಗ (2005-2006)ಸುಪ್ರಭಾತ (2008-2009)ಚಕ್ರತೀರ್ಥ (2012)ಗಳನ್ನು ನಿರ್ದೇಶಿಸಿದ್ದಾರೆ. 

ಪಿ. ಶೇಷಾದ್ರಿ