About the Author

ನಾಟಕಕಾರ ಪಿ.ಕೆ. ನಾರಾಯಣರವರು ಚಿಕ್ಕಪುತ್ತೂರಿನಲ್ಲಿ (ಜನನ: 16-03-1914) ಹುಟ್ಟಿದರು. ತಂದೆ ಕರಿಯಪ್ಪ, ತಾಯಿ ಲಕ್ಷ್ಮಿ.ಎಸ್.ಎಸ್.ಎಲ್.ಸಿ. ನಂತರ ಸೇರಿದ್ದು ಮಂಗಳೂರಿನ ಅಧ್ಯಾಪಕರ ತರಬೇತಿ ಕೇಂದ್ರ. ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವೀಧರರು. ಮಂಗಲ್ಪಾಡಿ ಹೈಯರ್ ಎಲಿಮೆಂಟರಿ ಶಾಲೆ ಮತ್ತು ಮಂಚಿಯ ಶಾಲೆಗಳಲ್ಲಿ ಉಪಾಧ್ಯಾಯರಾಗಿದ್ದರು. ಮಂಗಳೂರಿನ ಬೆಸೆಂಟ್ ಎಲಿಮೆಂಟರಿ ಶಾಲಾ ಅಧ್ಯಾಪಕರಾಗಿದ್ದರು. 1974 ರಲ್ಲಿ ಮಹಾತ್ಮಗಾಂಧಿಯವರು ಪುತ್ತೂರಿಗೆ ಬಂದಿದ್ದು, ಆಗ ಇವರು ತಮ್ಮ ಕೈಯಲ್ಲಿದ್ದ ಉಂಗುರವನ್ನೇ ನೀಡಿ ಖಾದಿಧಾರಿಗಳಾದರು. ಮಂಗಳೂರಿನ ಗಾಂಧಿ ಪ್ರತಿಷ್ಠಾನದ ಸದಸ್ಯರಾಗಿದ್ದರು.

ಇವರದು ‘ಪುನಾಕ’ ಕಾವ್ಯ ನಾಮ. ಕಾರಂತರು ನಿರ್ದೇಶಿಸಿದ ನಾಟಕಗಳ ಪಾತ್ರಧಾರಿ. ಸೊಹ್ರಾಬ್ – ರುಸ್ತುಂ ನಲ್ಲಿ ಸೊಹ್ರಾಬ್ ಪಾತ್ರ ಇವರಿಗೆ ಹೆಚ್ಚು ಪ್ರಖ್ಯಾತಿ ತಂದುಕೊಟ್ಟಿತ್ತು. ‘ಮಹಾತ್ಯಾಗಿ ಶ್ರೀ ಪುರಂದರ ದಾಸರು’, ಪ್ರಿಯದರ್ಶಿ (ಅಶೋಕನ ಕುರಿತು) ಪ್ರಕಟಿತ ನಾಟಕಗಳು. ಜೈನ ಸಾಹಿತ್ಯದ ರತ್ನಾಕರವರ್ಣಿಯ ಭರತೇಶ ವೈಭವ ಕೃತಿಯನ್ನು ತಿಳಿಗನ್ನಡದಲ್ಲಿ ಅನುವಾದಿಸಿದ್ದಾರೆ. ವಿವೇಕಾಭ್ಯುದಯದಲ್ಲಿ ಪ್ರಕಟವಾದ ಲೇಖನ ಮಾಲೆಯು ಮುಂದೆ ಭರತೇಶ ಚಕ್ರವರ್ತಿಯ ವೈಭವದ ಮೊದಲಭಾಗ ಭೋಗ ವಿಜಯದ ಭಾಗ ‘ಸರಸದ ದಿನಗಳು’. ದಿಗ್ವಿಜಯದ ಭಾಗ ‘ದಿಗ್ವಿಜಯದ ದಿನಗಳು’. ಯೋಗ ವಿಜಯ, ಮೋಕ್ಷ ವಿಜಯ, ಅರ್ಕಕೀರ್ತಿ ವಿಜಯಗಳೇ ‘ತಪಸ್ಸಿನ ದಿನಗಳು’ ಆಗಿ ಮೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ಮೊದಲ ಮೊಗ್ಗೆ (ಕವನ ಸಂಕಲನ), ಶ್ರೀ ವಾಲ್ಮೀಕಿ ರಾಮಾಯಣದ ಕಥೆ, ದಕ್ಷಿಣ ಕನ್ನಡದಲ್ಲಿ ಕನ್ನಡ ಬೆಳವಣಿಗೆ, ದಕ್ಷಿಣ ಕನ್ನಡದಲ್ಲಿ ಕನ್ನಡ ಬೆಳವಣಿಗೆ, ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟ (ಸಂಶೋಧನೆ) ಮೊಳಹಳ್ಳಿ ಶಿವರಾಯರು (ಜೀವನ ಚರಿತ್ರೆ), ಸಂಪಾದಿತ ಕೃತಿಗಳು: “ಆಯ್ದ ಮುತ್ತುಗಳು” (ಕಥಾ ಸಂಗ್ರಹ), ‘ಸಮ್ಮೇದ ಶೈಲಮಹಾತ್ಮೆ’ (ಜೈನಗ್ರಂಥ), ‘ಗಾಂಧಿ ಶತಾಬ್ದಿ ಕವಿತಾಂಜಲಿ’, ಕಿಲ್ಲೆಸ್ಮಾರಕ ಗ್ರಂಥ’, ಕಾರ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ದಿಬ್ಬಣ’, ಧರ್ಮಸ್ಥಳದ ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದ ‘ಆರೋಹಣ’, ಪಂಜೆಮಂಗೇಶರಾಯರ ಶತಮಾನೋತ್ಸವ ಗ್ರಂಥ ‘ತೆಂಕಣಗಾಳಿ’, ಮೊಳಹಳ್ಳಿ ಶಿವರಾಯರ ಶತಮಾನೋತ್ಸವ ಕೃತಿ ‘ನೂರರ ಮೇರು’ ಸಂಪಾದಿಸಿದ್ದಾರೆ. ಬೆಸೆಂಟ್ ಶಾಲೆಯ ಹಳೆಯ ವಿದ್ಯಾರ್ಥಿ ಸಂಘ, ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಸನ್ಮಾನಿಸಿವೆ. ಇವರು 19-05-983 ರಂದು ನಿಧನರಾದರು. 

ಪಿ.ಕೆ. ನಾರಾಯಣ

(16 Mar 1914-19 May 1983)