ಲೇಖಕಿ, ಸಂಗೀತಗಾರ್ತಿ ನಂದಾ ಎಂ. ಪಾಟೀಲ ಅವರು ಮೂಲತಃ ಧಾರವಾಡದವರು. ಸಾಹಿತ್ಯ ಸಂಗೀತ, ಲಲಿತ ಕಲೆಗಳ ಕೌಟುಂಬಿಕ ಪರಿಸರದಲ್ಲಿ ಬೆಳೆದ ಅವರು ತಮ್ಮ 8ನೇ ವಯಸ್ಸಿನಲ್ಲೇ ಸಂಗೀತ ಕಲಿಕೆ ಆರಂಭಿಸಿ, ಸಂಗೀತದಲ್ಲೇ ಚಿನ್ನದ ಪದಕದೊಂದಿಗೆ (1984) ಬಿ.ಎ. ಪದವಿ ಪಡೆದರು. ಕರ್ನಾಟಕ ವಿವಿಯಲ್ಲಿ ಸಂಗೀತದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್‍ಯಾಂಕ್ ನಲ್ಲಿ ಪಡೆದರು. ಸಂಗೀತ ವಿಷಯ ವ್ಯಾಪ್ತಿಯಲ್ಲೇ ಅಂದರೆ ಜಾನಪದ ಸಂಗೀತದಲ್ಲಿ (1997) ಕರ್ನಾಟಕ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ವಚನ ಗಾಯನ ಪರಂಪರೆ:ಒಂದು ಸಂಗೀತಾತ್ಮಕ ಅಧ್ಯಯನ) ಪೂರ್ಣಗೊಳಿಸಿದರು. ಜೈಪುರದ ಅತ್ರೌಲೆ ಘರಾಣೆಯ ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ವಿದೂಷಿ ಜಯಶ್ರೀ ಪಾಟ್ನಿಕರ್, ಡಾ. ರಾಜಶೇಖರ ಮನ್ಸೂರ ಅವರ ಶಿಷ್ಯರು.
ಕೃತಿಗಳು-ಧ್ವನಿ ಸುರುಳಿಗಳು: ‘ಅಕ್ಕಾ ಕೇಳವ್ವಾ’ ಧ್ವನಿ ಸುರುಳಿ ಮೂಲಕ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ನಂದಾ ಪಾಟೀಲರು ಸದ್ಯ, ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು. ‘ಎನ್ನೊಡೆಯ ಸಂಗಮನಾಥ’ ಹಾಗೂ ‘ಸಲಹು ಕೂಡಲ ಸಂಗಮದೇವ’ ವಚನಗಳ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.
ವಚನ ಸಂಗೀತ ರತ್ನ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಸಂಗೀತ ಕ್ಷೇತ್ರದ ದಿಗ್ಗಜ ಬಸವರಾಜ ರಾಜಗುರು (2009), ಜಾನಪದ ಸಂಗೀತ ಕ್ಷೇತ್ರದ ಗಾಯಕ ಹುಕ್ಕೇರಿ ಬಾಳಪ್ಪ (2010) ಮತ್ತು ಸಂಗೀತದ ಹಿರಿಮೆ ಕುರಿತ ‘ಸ್ವರಯಾತ್ರೆ (2013) ಕೃತಿ ಪ್ರಕಟಿಸಿದ್ದಾರೆ.
ಮೈಸೂರು ದಸರಾ, ಬನವಾಸಿಯ ಕದಂಬೋತ್ಸವ, ವಿಜಾಪುರದ ನವರಸಪುರ ಉತ್ಸವ, ಹಂಪಿ ಉತ್ಸವ, ವಿವಿಧೆಡೆ ನಡೆಯುವ ವಚನೋತ್ಸವಗಳಲ್ಲಿ ಹಲವಾರು ಸಂಗೀತ ಸಮಾರಂಭಗಳನ್ನು ನೀಡಿದ್ದಾರೆ. ಗುಲಬರ್ಗಾ ವಿವಿ ಇಂಗ್ಲಿಷ್ ವಿಭಾಗ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಪಾಟೀಲರು ಪತ್ನಿ ಡಾ. ನಂದಾ ಅವರ 50ನೇ ವರ್ಷದ ನೆನಪಿನಲ್ಲಿ‘ ‘ಡಾ. ನಂದಾ ಎಂ ಪಾಟೀಲ ಸಂಗೀತ ಪುರಸ್ಕಾರ ಪ್ರಶಸ್ತಿ’ ಸ್ಥಾಪಿಸಿದ್ದಾರೆ.
ಪ್ರಶಸ್ತಿ-ಗೌರವಗಳು: ಡಾ. ಮಲ್ಲಿಕಾರ್ಜುನ ಮನ್ಸೂರು ರಾಷ್ಟ್ರೀಯ ಟ್ರಸ್ಟ್ ನಿಂದ ರಾಷ್ಟ್ರೀಯ ಯುವ ಪುರಸ್ಕಾರ ಪ್ರಶಸ್ತಿ, ರಮಣ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಸಿದ್ಧರಾಮ ಜಂಬಲದಿನ್ನಿ ವಚನ ಗಾಯನ ಪ್ರಶಸ್ತಿ, ಉಜ್ಜಯಿನಿ ಪೀಠದಿಂದ ಗಾನಕೋಗಿಲೆ, ಮಹಾಲಿಂಗಪುರದ ಬಿ.ಎಂ. ಪ್ರತಿಷ್ಠಾನದಿಂದ ಹಳಕಟ್ಟಿ ಶ್ರೀ ಪ್ರಶಸ್ತಿ,, ಹುಬ್ಬಳ್ಳಿಯ ಅವ್ವ ಹಾಗೂ ಚಿತ್ರದುರ್ಗದ ಮುರುಘಾಮಠದಿಂದ ಅಕ್ಕ ನಾಗಮ್ಮ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ವಚನ ಸಂಗೀತ ಪುರಸ್ಕಾರ ದೊರೆತಿದೆ. ಕರ್ನಾಟಕ ನೃತ್ಯ ಹಾಗೂ ಸಂಗೀತ ಅಕಾಡೆಮಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ವಿವಿಧ ಆಕಾಶವಾಣಿಯ ಶಾಸ್ತ್ರೀಯ, ಸುಗಮ ಸಂಗೀತ ಹಾಗೂ ರಾಗ ಸಂಯೋಜನೆಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.