ನಾಗರಾಜ ಎಂ.ಹುಡೇದ ಅವರು ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡದವರು. 2004ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗಾಗಿ ‘ಅರಳುವ ಮೊಗ್ಗು’ ದೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಉತ್ಸವ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರುತ್ತಾರೆ. ಹಲವಾರು ಸಂಘಟನೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು : ನಗುವ ತುಟಿಗಳಲ್ಲಿ(ಕವನ ಸಂಕಲನ), ಸುವರ್ಣ ಜ್ಞಾನ (ಕರ್ನಾಟಕ ಸಂಬಂಧಿತ ರಸಪ್ರಶ್ನೆಗಳು), ಕಿರುಗೊಂಚಲು (ಸಂಪಾದಿತ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ), ಭರವಸೆ (ಕವನ ಸಂಕಲನ), ಶಬ್ದಕೋಶ (ಕನ್ನಡ, ಗೌಳಿ, ಇಂಗ್ಲಿಷ್ ಭಾಷೆಯಲ್ಲಿ), ಕಲಿ ಕಲಿಸು, ಹಚ್ಚೆಗಳು 2 (ಸಂಪಾದಿತ), ಅವತಾರ್ ಮತ್ತು ಹಾರುವ ಕುದುರೆ (ಮಕ್ಕಳ ಕಥಾ ಸಂಕಲನ).
ಪ್ರಶಸ್ತಿ-ಪುರಸ್ಕಾರಗಳು : ವಾ.ಕ.ರ.ಸಾ ಸಂಸ್ಥೆ ಯಲ್ಲಾಪುರ ಘಟಕದ ಕನ್ನಡ ಕ್ರಿಯಾ ಸಮಿತಿಯವರ ಅಭಿನಂದನಾ ಸನ್ಮಾನ, ಉತ್ತರ ಕನ್ನಡ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಉತ್ತಮ ಸಂಘಟಕ’, ಶಿಕ್ಷಣ-ಜ್ಞಾನ ಪತ್ರಿಕೆ ಬೆಂಗಳೂರು ಜಿಲ್ಲಾ ಕ.ಸಾ.ಪ ನೀಡುವ ‘ರಾಜ್ಯೋತ್ಸವ ಯುವ ಕೃತಿ’ ಪುರಸ್ಕಾರ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಫಿನಿಕ್ಸ ಬುಕ್ ಹೌಸ್ ಮೈಸೂರು ಇವರ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿ ಲಭಿಸಿದೆ.