ಆಧ್ಯಾತ್ಮಿಕ ನಿಲುವಿನ ಸಮಾಜವಾದಿ ಚಿಂತಕರಾಗಿದ್ದ ನಿ. ಮುರಾರಿ ಬಲ್ಲಾಳರು ಉಡುಪಿಯಲ್ಲಿ ಆಧುನಿಕ ಕಾಲದ ಋಷಿಯಂತೆ ಬದುಕಿದವರು. ‘ರಥಬೀದಿ ಗೆಳೆಯರು’ ಸಂಸ್ಥೆಯನ್ನು ಮುರಾರಿಯರು ಕೇವಲ ಸಾಂಸ್ಕೃತಿಕ ಸಂಸ್ಥೆಯಾಗಿ ಉಳಿಯಲು ಬಿಡಿದೆ ರಾಜಕೀಯ- ಸಮಾಜವಾದದ ಆಶಯಗಳ ಚರ್ಚೆಗೂ ವಿಸ್ತರಿಸಿದ್ದರು. ಅರ್ಥಶಾಸ್ತ್ರದ ಅಧ್ಯಯನ ನಡೆಸಿ ಅರ್ಥಶಾಸ್ತ್ರಜ್ಞ ಆಗಿದ್ದ ಮುರಾರಿ ಅವರಿಗೆ ‘ಡೆವಲಪ್‌ಮೆಂಟ್’ನ ಮಿತಿಗಳ ಅರಿವು ಇತ್ತು. ಜಿಡ್ಡು ಕೃಷ್ಣಮೂರ್ತಿ ಅವರ ವಿಚಾರಗಳ ಬಗ್ಗೆ ಪುಸ್ತಕ ಪ್ರಕಟಿಸಿದ್ದ ಬಲ್ಲಾಳರು ಪರಿಸರವಾದಿ ಕೂಡ ಹೌದು. ಬಲ್ಲಾಳರನ್ನು ಕುರಿತು ಲೇಖಕ ಯು.ಆರ್. ಅನಂತಮೂರ್ತಿ ಅವರು ’ಅರ್ಥಶಾಸ್ತ್ರಜ್ಞನಾಗಿ ತೆಗೆದುಕೊಂಡ ನಿಲುವಿಗೂ, ಸಂಗೀತ-ಕಾವ್ಯವನ್ನು ಮೆಚ್ಚುತ್ತಿದ್ದುದಕ್ಕೂ, ಜೆ.ಕೆ, ಉಪನಿಷತ್, ಬೌದ್ಧಧರ್ಮ-ಇವುಗಳಲ್ಲಿ ಅವರಿಗಿದ್ದ ಶ್ರದ್ಧೆಗೂ ಹಾಗೂ ತನ್ನ ಸಂಪ್ರದಾಯದಿಂದಲೇ ಬಂದ ಆಚಾರಗಳನ್ನೂ ಪಾಲಿಸುತ್ತಿದ್ದ ರೀತಿಗೂ ಪರಸ್ಪರ ದೊಡ್ಡ ಹೊಂದಾಣಿಕೆಯಿತ್ತು’ ಎಂದು ಅಭಿಪ್ರಾಯಪಟ್ಟಿದ್ದರು.