ಆಯುರ್ವೇದ ವೈದ್ಯರಾಗಿರುವ ಡಾ. ಎನ್. ಅನಂತರಾಮನ್ ಅವರು ಲೇಖಕರೂ ಕೂಡ. ಕಳೆದ 47 ವರ್ಷಗಳಿಂದ ಯಶಸ್ವಿ ಆಯುರ್ವೇದ ವೈದ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಆಯುರ್ವೇದ ವYದ್ಯಕ್ಕೆ ಸಂಬಂಧಿಸಿದಂತೆ 300ಕ್ಕೂ ಅಧಿಕ ಲೇಖನಗಳನ್ನು ನಿಯತಕಾಲಿಕೆಗಳಲ್ಲಿ ಬರೆದಿದ್ದಾರೆ. ಹಾಗೂ ತೊನ್ನು ಆಯುರ್ವೇದೀಯ ಆಹಾರ ಕ್ರಮ, ಆಯುರ್ವೇದದ ದೃಷ್ಟಿಯಲ್ಲಿ ಮಕ್ಕಳ ಆರೋಗ್ಯ, ಆಯುರ್ವೇದ ಚಿಕಿತ್ಸಾ ಮಾರ್ಗದರ್ಶಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಇವರು ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿ ಖ್ಯಾತ ಪತ್ರಿಕೋದ್ಯಮಿಗಳಾದ ಜಿ.ಎ. ನರಸಿಂಹಮೂರ್ತಿ ಮತ್ತು ಸಾವಿತ್ರಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ಇವರು ಬೆಂಗಳೂರಿನ ಸರಸ್ವತಿ ವಿದ್ಯಾಮಂದಿರ ಮತ್ತು ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪೂರೈಸಿದ ನಂತರ ಪಾರ್ಥನಾರಾಯಣ ಹಾಗೂ ಮಳಿಗೆ ಗೋಪಾಲಕೃಷ್ಣ ಅವರ ಉತ್ತೇಜನದಿಂದ ಅವರು 1968ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿಗೆ ಸೇರಿದರು. ಆಯುರ್ವೇದದ ಬಗ್ಗೆ ಇದ್ದ ಆಸಕ್ತಿ ಮತ್ತು ಅಧ್ಯಯನದಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ 1973ರಲ್ಲಿ ಬಿಎಸ್‌ಎಎಂ ಪದವಿಯಲ್ಲಿ ರ್ಯಾಂಕ್ ಗಳಿಸುವ ಮೂಲಕ ತೇರ್ಗಡೆಯಾದರು. ನಂತರ 1978ರಲ್ಲಿ ಆಯುರ್ವೇದದಲ್ಲಿ ಎಂಡಿ ಪದವಿಯನ್ನೂಇವರು ಪಡೆದಿರುತ್ತಾರೆ.
ಇನ್ನು, ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ್ದ ರೇಡಿಯೋ ಡಾಕ್ಟರ್' ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿ ಸಸ್ಯ ಸಂಜೀವಿ, ಸಸ್ಯ ಸುರಭಿ, ಸಸ್ಯ ಸಿರಿ' ಎಂಬ ವಿಷಯಗಳ ಬಗ್ಗೆ ಹಾಗೂ ದೂರದರ್ಶನ, ಉದಯ ಟಿವಿ, ಈ-ಟಿವಿ ಗಳಲ್ಲಿ ಆಯೋಜಿಸಿದ್ದ ವೈದ್ಯಕೀಯ ಚರ್ಚೆಗಳಲ್ಲಿ ಭಾಗವಹಿಸಿ ಜನತೆಗೆ ಆರೋಗ್ಯದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಇದಲ್ಲದೆ 136 ಜನ ಆಯುರ್ವೇದ ವೈದ್ಯರುಗಳಿಗೆ ತರಬೇತಿ ನೀಡಿರುವ ಇವರ ಬಳಿ ಅಲೋಪಥಿ ವೈದ್ಯರು ಮತ್ತು ವಿದ್ಯಾರ್ಥಿಗಳು ಆಯುರ್ವೇದದಲ್ಲಿ ಅಲ್ಪಾವಧಿ ಶಿಕ್ಷಣ ಪಡೆಯುತ್ತಿದ್ದು ಅದರಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾದವರ ಹೆಚ್ಚಿನವರಾಗಿದ್ದಾರೆ.