ಲಂಕೇಶ್ ಪತ್ರಿಕೆ ಬರಹಗಾರರಾಗಿದ್ದ ಮೋಹನ ನಾಗಮ್ಮನವರ ಅವರು 1962 ಅಕ್ಟೋಬರ್ 7ರಂದು ಧಾರವಾಡ ಜಿಲ್ಲೆಯ ಅಗಡಿಯಲ್ಲಿ ಜನಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಗೋಕಾಕ ಚಳವಳಿ, ದಲಿತ ಚಳವಳಿಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದರು.
ಇವರು ಬರೆದ ಕೃತಿಗಳೆಂದರೆ ವಿಧಾನ ಸೌಧ, ಅಗ್ರಹಾರದ ಒಂದು ಸಂಜೆ, ಮಹಾನಿರ್ಗಮನ (ಕವನ ಸಂಕಲನ), ಚಿಂತಾಮಣಿ, ಸಂಕಟಪುರದ ನಾಟಕ ಪ್ರಸಂಗ (ಕಥಾ ಸಂಕಲನ), ಬೆಡಗಿನೆದುರಿನ ಬೆರಗು, ಕಥನ ಕುತೂಹಲ, ಬಯಲ ಬೇರ ಚಿಗುರು (ಲೇಖನಗಳು) ಮುಂತಾದವು. ಮೋಹನ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು 2018 ಡಿಸೆಂಬರ್ 8ರಂದು ಮರಣ ಹೊಂದಿದರು.