ಸಾಹಿತಿ, ಪ್ರಕಾಶಕ, ನಿರ್ದೇಶಕ ಮಾವಿನಕೆರೆ ರಂಗನಾಥನ್ ಅವರು 1943 ಡಿಸೆಂಬರ್ 21ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಾವಿನಕೆರೆಯಲ್ಲಿ ಜನಿಸಿದರು. ತಾಯಿ ಸೀತಮ್ಮ. ತಂದೆ ಎಚ್.ಆರ್. ಶಿಂಗೈಯ್ಯಂಗಾರ್. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದರು. ಇವರು ಬರೆದ ಹಲವಾರು ಸಣ್ಣ ಕತೆಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿವೆ.
ಇವರ ರುಕ್ಮಿಣಿ, ಚಂಕ್ರಬಂಧ್ರನ, ಉತ್ತರಾಯಣ, ಪರ್ಜನ್ಯ, ಮಿಥುನ, ಉಳಿದದ್ದು ಆಕಾಶ, ಮಾವಿನ ಕೆರೆ ಆಯ್ದ ಭಾಗ, ಮುಂತಾದ ಕತೆಗಳು ಕಥಾ ಸಂಕಲನದಲ್ಲಿ ಪ್ರಕಟಗೊಂಡಿವೆ. ಏಳು ಸುತ್ತಿನ ಕೋಟೆ, ಜಲತರಂಗ ಇವರು ರಚಿಸಿದ ಕಾದಂಬರಿಗಳು. ಸಂಕ್ಷಿಪ್ತ, ನಮ್ಮ ಮಾಸ್ತಿ ಮತ್ತು ಮಾಸ್ತಿ ಕನ್ನಡದ ಆಸ್ತಿ, ದಿಗಂತ, ಶ್ರೀನಿವಾಸ, ಶಿಕ್ಷಣ-ಸಂಸ್ಕೃತಿ, ಕಥಾ ಸಂಪದ, ಮಾಸ್ತಿ ಸಮಗ್ರ ಕಥೆಗಳು ಭಾಗ-1 ಮತ್ತು 2, ಚಿತ್ರಮಯ ಜ್ಞಾನ ಕೋಶ, ನೊಬೆಲ್ ಪ್ರಶಸ್ತಿ ಕತಾ ಜಗತ್ತು, ನೊಬೆಲ್ ಪ್ರಶಸ್ತಿ ಕಾವ್ಯ ಜಗತ್ತು, ನೊಬೆಲ್ ಪ್ರಶಸ್ತಿ ಕಾದಂಬರಿ ಜಗತ್ತು, ಮಾಸ್ತಿ ಪ್ರಶಸ್ತಿ ಮಹನೀಯರು, ಎಲ್.ಎಸ್. ಶೇಷಗಿರಿರಾವ್ ಬದುಕು ಬರೆಹ ಮತ್ತು ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಸಂಪುಟಗಳು ಭಾಗ 1 ಮತ್ತು 2 ಇವರ ಪ್ರಮುಖ ಕೃತಿಗಳು.
ಇವರು ಸಂಘರ್ಷ, ಮಿಥುನ ಚಲನಚಿತ್ರಗಳನ್ನು ನಿದೇರ್ಶಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪುರಸ್ಕಾರ ಹಾಗೂ ವರ್ಧಮಾನ ಪ್ರಶಸ್ತಿ ಸಂದಿದೆ.