About the Author

ಮಾರ್ಷಲ್ ಶರಾಂ- ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ.ಮಾರ್ಷಲ್ ಶರಾಂರವರು ಉಪನ್ಯಾಸ ವೃತ್ತಿಯೊಂದಿಗೆ ಕೆಲವು ವಿಶೇಷ ಪ್ರವೃತ್ತಿಗಳನ್ನು ರೂಢಿಸಿಕೊಂಡಿದ್ದಾರೆ. ಪರಿಸರ ಹೋರಾಟ, ಪ್ಲಾಸ್ಟಿಕ್ ನಿರ್ಮೂಲನಾ ಚಳುವಳಿ, ಚಾರಣಗಳ ಸಂಘಟನೆ, ವ್ಯಕ್ತಿತ್ವ ವಿಕಸನ ಶಿಬಿರಗಳು, ಮಕ್ಕಳ ಶಿಬಿರಗಳು ಹೀಗೆ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಂಸ್ಕೃತಿಯ ಕುರಿತಂತೆ ಇವರು ಮುನ್ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರಸಿದ್ದ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ನೂರೈವತ್ತಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಮರ್ಶಾ ಲೇಖನಗಳನ್ನು ಪ್ರಕಟಿಸಿ ವಿಮರ್ಶಕರಾಗಿಯೂ ದಾಖಲಾಗಿದ್ದಾರೆ. ಕೂಡಿಗೆ ಮತ್ತು ಮಲೆನಾಡಿಗ ಅಭಿನಂದನಾ ಗ್ರಂಥಗಳ ಸಂಪಾದಕರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕ ಮಂಡಳಿಯ ಸಲಹೆಗಾರರಾಗಿಯೂ ಶ್ರೀಯುತರು ಸೇವೆ ಸಲ್ಲಿಸಿದ್ದಾರೆ. ನವೋದಯ ಕಾದಂಬರಿಗಳಲ್ಲಿ ಮತಾಂತರ ಮತ್ತು ಸಾಂಸ್ಕೃತಿಕ ಸಂಘರ್ಷ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಚಾರಣಗಳನ್ನು ಕುರಿತು ಐವತ್ತಕ್ಕೂ ಹೆಚ್ಚು, ಪರಿಸರ ಕುರಿತು ಎಪ್ಪತ್ತೈದಕ್ಕೂ ಹೆಚ್ಚು ಸ್ಥಳೀಯ ಐತಿಹಾಸಿಕ ಮಹತ್ವ ಕುರಿತು ಇಪ್ಪತ್ತೈದಕ್ಕೂ ಹೆಚ್ಚು ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆಕಾಶವಾಣಿಯಲ್ಲಿ ಹಲವು ಚಿಂತನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರು ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ನೇಕಾರ ಸೇವೆ ಸಲ್ಲಿಸುತ್ತಿದ್ದಾರೆ.

ಮಾರ್ಷಲ್ ಶರಾಂ