ಹಿರಿಯ ಲೇಖಕ ಎಂ.ಎನ್. ವಾಲಿ ಅವರ ಪೂರ್ಣ ಹೆಸರು ಮಲ್ಲಿಕಾರ್ಜುನ ವಾಲಿ. ಜಾನಪದ ಸಂಶೋಧಕ, ಶಿವಶರಣ ಸಾಹಿತ್ಯ ಹಾಗೂ ವ್ಯಕ್ತಿ ಚಿತ್ರ ಕೃತಿಗಳ ಕರ್ತೃ, ಸಾಹಿತ್ಯ ಪ್ರಚಾರ ಪ್ರಸಾರಕರಾದ ಮಲ್ಲಿಕಾರ್ಜುನ ವಾಲಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿಯಲ್ಲಿ. ತಂದೆ ನಿಂಗಪ್ಪ ವಾಲಿ, ತಾಯಿ ಸಂಗನ ಬಸವ್ವ. ಸಾಲೋಟಗಿ ಹಾಗೂ ಇಂಡಿಯಲ್ಲಿ ಪ್ರೌಢಶಾಲೆಯ ವರೆಗೆ ವಿದ್ಯಾಭ್ಯಾ ಮುಗಿಸಿದ ಅವರು ಜಮಖಂಡಿಯ ಕಲಾ ಹಾಗೂ ವಿಜ್ಞಾನ ಕಾಲೇಜಿನಿಂದ ಬಿ.ಎ. ಪದವಿ ಪಡೆದರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಶಾಸನದಲ್ಲಿ ಡಿಪ್ಲೊಮಾ ಹಾಗೂ ಎಂ.ಎ ಪದವಿ ಪಡೆದ ಅವರು, ‘ಸಿಂಪಿ ಲಿಂಗಣ್ಣನವರ ಜೀವನ ಹಾಗೂ ಸಾಹಿತ್ಯ, ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ವಾಲಿ ಅವರು ಕಾಗವಾಡದ ಶಿವಾನಂದ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಹಾರೂಗೇರಿ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ‍್ಯನಿರ್ವಹಿಸಿ ನಿವೃತ್ತಿ ಹೊಂದಿದರು. ಶಿಕ್ಷಕರಾಗಿದ್ದಾಗಿನಿಂದಲೂ ಹಲವಾರು ಸಾಹಿತ್ಯ, ಸಾಂಸ್ಕ್ರತಿಕ ಕಾರ‍್ಯಕ್ರಮಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಷಣ ಹಾಗೂ ಪ್ರಬಂಧಗಳನ್ನು ಮಂಡಿಸಿದ್ದಲ್ಲದೆ ಹಲವಾರು ಜಾನಪದ ಕೃತಿಗಳು, ವ್ಯಕ್ತಿ ಚಿತ್ರಗಳು, ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜನಪದ ಸಾಹಿತ್ಯ ಕೃತಿಗಳಾದ ‘ಜನಪದ ಸಾಹಿತ್ಯದಲ್ಲಿ ನೀತಿ’, ‘ಜನಪದ ಜೀವನ ತರಂಗಗಳು’, ‘ಜನಪದ ಹಬ್ಬದ ಹಾಡುಗಳು’, ‘ಜಾನಪದ ಒಗಟುಗಳು’, ‘ಸಾವಿರದ ಜನಪದ ಗೀತೆಗಳು’, ‘ವಿಜಾಪುರ ಜಿಲ್ಲೆಯ ಜನಪದ ಕಲೆಗಳು’, ಮತ್ತು ’ಜನಪದ ಕಲಾವಿದರು’ ‘ಕನ್ನಡ ಜಾನಪದ ಕಥಾಗುಚ್ಛ’, ‘ದುಂಡುಮಲ್ಲಿಗೆ ಹೂವ ಬುಟ್ಟಿಲಿ’ ಮುಂತಾದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.
ಕವನ ಸಂಕಲನಗಳಾದ ಶುಭೋದಯ, ಹೊಂಬಿಸಿಲು, ಶಿವಶರಣರು ಮತ್ತು ಇತರ ವ್ಯಕ್ತಿ ಚಿತ್ರ ಕೃತಿಗಳಾದ ಶ್ರೀ ಮರಿ ಮಹಾರಾಜರು, ಶರಣ ಅಜಗಣ್ಣ, ನಾಟ್ಯಾನಂದ ನೀಳು ಮಾಸ್ತರರು, ಡಾ.ಸಿಂಪಿ ಲಿಂಗಣ್ಣ, ಕರ್ಮಯೋಗಿ ಆರ್. ಎಸ. ನಾವದಗಿ, ವಾಲಿ ಬಸಪ್ಪ ಮಾಸ್ತರು, ಹುಟ್ಟು ಹೋರಾಟಗಾರರು, ತೆಲಸಂಗದ ಶ್ರೀ ಬಸವಲಿಂಗ ಸ್ವಾಮಿಗಳು, ಶರಣೆ ಶಾಂತಕ್ಕ, ಕನ್ನಡದ ಕಣ್ಮಣಿ ಗಂಗಾಧರ ಕೋರಳ್ಳಿ ಸೇರಿದಂತೆ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಾಟಕ ಮತ್ತು ರೇಡಿಯೋ ನಾಟಕಗಳಾದ ನನ್ನ ಭೂಮಿ, ಚಂದ್ರಹಾಸ ಮತ್ತು ಇತರ ನಾಟಕಗಳು, ಷೇಕ್ಸಪಿಯರನ ಮೂರು ಕೃತಿಗಳು ಮುಂತಾದ ನಾಟಕಗಳು; ‘ಚಿಂತನ ಪ್ರಭೆ’, – ರೇಡಿಯೋ ಚಿಂತನೆಗಳು, ಸಾರಂಗ ಮಠದ ಹಂಪಯ್ಯನವರ ಅಭಿನಂದನ ಗ್ರಂಥ ‘ಸಂತೃಪ್ತಿ’, ಎಂ.ಎ. ಹುಂಡೇಕಾರ ಅಭಿನಂದನ ಗ್ರಂಥ ‘ಮಹಾಂತ’, ಜಿ.ಎಂ.ವಾರದ ಅಭಿನಂದನ ಗ್ರಂಥ ‘ಹಿತಚಿಂತಕ’ ಮುಂತಾದ ಅಭಿನಂದನ ಗ್ರಂಥಗಳನ್ನು ಸಂಪಾದಿಸಿದ್ದಾರೆ. 1980 ರಲ್ಲಿ ಭುವನೇಶ್ವರಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಹೆಸರಾಂತ ಬರಹಗಾರರ ಗ್ರಂಥಗಳಲ್ಲದೆ ಉದಯೋನ್ಮುಖ ಲೇಖಕರ ಹಲವಾರು ಗ್ರಂಥಗಳನ್ನು ಪ್ರಕಟಿಸಿ ಉತ್ತೇಜನ ನೀಡಿದ್ದಾರೆ.
ಸದಾ ಸಾಹಿತ್ಯ ಚಟುವಟಿಕೆಗಳು, ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದು, ಧಾರವಾಡದ ಆಕಾಶವಾಣಿ ಕೇಂದ್ರದ ಜಾನಪದ ಸಂಗೀತ ವಿಭಾಗದ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿಯ ಸದಸ್ಯರಾಗಿ, ಅಖಿಲ ಭಾರತ ವೀರಶೈವ ಮಹಾ ಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ‍್ಯ ನಿರ್ವಹಿಸಿದ್ದಾರೆ. ಇಂಡಿ ತಾಲ್ಲೂಕಿನ ನಿವರಗಿಯಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಗುಡ್ಡಪುರದಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಬಸವನ ಬಾಗೇವಾಡಿಯಲ್ಲಿ ಜರುಗಿದ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂತಾದವುಗಳ ಅಧ್ಯಕ್ಷತೆ ಗೌರವಗಳ ಜೊತೆಗೆ ಆದರ್ಶ ಶಿಕ್ಷಕ ಪ್ರಶಸ್ತಿ, ವಚನ ದರ್ಪಣ ಕೃತಿಗೆ ದ.ರಾ. ಬೇಂದ್ರೆ ಪಶಸ್ತಿ, ಜಾನಪದ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಾನಪದ ಜಂಗಮ ಎಸ್.ಕೆ. ಕರೀಂಖಾನ್ ಪ್ರಶಸ್ತಿ, ಚಿತ್ರದುರ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ವಿಶ್ವ ಚೇತನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ.