About the Author

ಪತ್ರಕರ್ತ, ಶಿಕ್ಷಕ ಲಿಂಗಣ್ಣ ಸತ್ಯಂಪೇಟೆ ಅವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದವರು. 1980ರಲ್ಲಿ ಲಂಕೇಶ್ ಪತ್ರಿಕೆಗೆ ಲೇಖನಗಳನ್ನು ಬರೆಯಲು ಆರಂಭಿಸಿ, ಇಡೀ ಹೈದ್ರಾಬಾದ್ -ಕರ್ನಾಟಕದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ದೋಷಪೂರಿತ ವ್ಯವಸ್ಥೆ ವಿರುದ್ಧ ಕಟುವಾಗಿ ಬರೆದು, ಜನರ ಜಾಗೃತಿಯ ಅನಿವಾರ್ಯತೆಯನ್ನು ಎಚ್ಚರಿಸಿದ್ದರು. 

ಅಗ್ನಿಅಂಕುರ -ವಾರಪತ್ರಿಕೆಯನ್ನು 10 ವರ್ಷ ಕಾಲ ನಡೆಸಿ, ನಂತರ ಬಸವ ಮಾರ್ಗ ಪತ್ರಿಕೆಯನ್ನು ಹುಟ್ಟುಹಾಕಿದರು. 12ನೇ ಶರಣರ ವಿಚಾರಗಳ ಹಿನ್ನೆಲೆಯಲ್ಲಿ ‘ಮನೆಯಲ್ಲಿ ಮಹಾಮನೆ’ ಎಂಬ ವಚನಗಳ ಓದು, ಉಪನ್ಯಾಸ ಕಾರ್ಯಕ್ರಮಗಳನ್ನು ಮನೆಮನೆಯಲ್ಲೇ ಹಮ್ಮಿಕೊಳ್ಳುವುದು ಇದರ ವೈಶಿಷ್ಟ್ಯವಾಗಿತ್ತು. ‘ಬಸವ ಮಾರ್ಗ ಪ್ರತಿಷ್ಠಾನ’ ಎಂಬ ಸಂಘಟನೆ ಮೂಲಕ ‘ಬಸವ ಬೆಳಗು’ ಎಂಬ ಕಾರ್ಯಕ್ರಮವನ್ನೂ ಆಯೋಜಿಸುತ್ತಿದ್ದರು. 

ಕೃತಿಗಳು: ಗ್ರಾಮೀಣ ಭಾರತ, ಮಠಗಳು ಮಾರಾಟಕ್ಕಿವೆ, ಪ್ರಸಾದ ಪರಿಣಾಮ, ಕಡಕೋಳ ಮಡಿವಾಳಪ್ಪ, ಬಸವ ಚಳವಳಿ, ರಾಜಕಾರಣಿಗಳ ತಲೆಬುರುಡೆ, ಯಜಮಾನ (ತಂದೆ ಗುರಪ್ಯಪನವರ ಶರಣ ವ್ಯಕ್ತಿತ್ವ ಪರಿಚಯ), ಬಸವಣ್ಣತನದ ಎರಡು ರೀತಿಗಳು ಹೀಗೆ ಒಟ್ಟು 13 ಕೃತಿಗಳನ್ನು ಹಾಗೂ 3 ಕೃತಿಗಳನ್ನು ಸಂಪಾದಿಸಿದ್ದಾರೆ. 

25-07-2013 ರಂದು ರಾತ್ರಿ ಕಲಬುರ್ಗಿಯ ಶರಣಬಸಪ್ಪ ದೇವಸ್ಥಾನದ ಮುಂದೆ ಇವರನ್ನು ಹತ್ಯೆ ಮಾಡಲಾಯಿತೋ, ಹೃದಯಾಘಾತವಾಗಿ ನಿಧನರಾದರೋ ಎಂಬುದು ನಿಗೂಢ. 

ಲಿಂಗಣ್ಣ ಸತ್ಯಂಪೇಟೆ