ಕವಿ ಲಕ್ಷ್ಮಿಕಾಂತ ಮಿರಜಕರ್ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನವರು. ತಂದೆ ನೇತಾಜಿ, ತಾಯಿ ಲಕ್ಷ್ಮಿ. ಶಿಗ್ಗಾಂವ್ ನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ, ಬೆಂಗಳೂರಿನ ಮಾರತಹಳ್ಳಿಯ ಎಂ.ಎ.ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಇಡ್ ಪದವಿ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ ಎ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಮಾಧ್ಯಮ ಆಧ್ಯಯನ ಎಂ ಎ ಪದವಿ ಪೂರೈಸಿದ್ದಾರೆ. ಈಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ (ಪಿ.ಎಚ್.ಡಿ) ಸಂಶೋಧನಾ ವಿದ್ಯಾರ್ಥಿ. ಸದ್ಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರು.
ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವಾರು ಕವಿಗೋಷ್ಠಿ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಧಾರವಾಡ ಆಕಾಶವಾಣಿಯಿಂದ ಇವರ ಕವಿತೆಗಳ ವಾಚನ ಪ್ರಸಾರಗೊಂಡಿದೆ. ಬಿಡಿ ಕವಿತೆಗಳಿಗೆ ಸಂಕ್ರಮಣ ಬಹುಮಾನ, ನವೀನ ಚಂದ್ರ ಕಾವ್ಯ ಬಹುಮಾನ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾವ್ಯ ಸ್ಪರ್ಧೆಯ ಬಹುಮಾನ, ಅಕ್ಷರ ಐಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳು ಲಭಿಸಿವೆ.
ಮೈಸೂರಿನ ಕರ್ನಾಟಕ ಕಾವಲು ಪಡೆ ಬಳಗದಿಂದ 2016ನೇ ಸಾಲಿನ “ಆದರ್ಶ ಶಿಕ್ಷಕ ಪ್ರಶಸ್ತಿ”, ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ “ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ” ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ 2018 ನೇ ಸಾಲಿನ “ಉತ್ತಮ ಕನ್ನಡ ಶಿಕ್ಷಕ” ಪ್ರಶಸ್ತಿ ಲಭಿಸಿವೆ.
ವಸತಿ ಶಾಲೆಯ ಪ್ರತಿಭಾವಂತ ಮಕ್ಕಳ ಬರಹಗಳನ್ನು ಒಳಗೊಂಡಿರುವ “ಚಿಲುಮೆ” ಕೃತಿ ಸಂಪಾದಿಸಿ ಪ್ರಕಟಿಸಿದ್ದಾರೆ. ‘ಬಯಲೊಳಗೆ ಬಯಲಾಗಿ’ ಎಂಬುದು ಇವರ ಗಜಲ್ ಗಳ ಮೊದಲ ಸಂಕಲನ.