ಕೃಷ್ಣಮೂರ್ತಿ ಕವತ್ತಾರ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕವತ್ತಾರ್ ನವರು. ಪ್ರತಿಷ್ಠಿತ ನೀನಾಸಂ ಸಂಸ್ಥೆಯಲ್ಲಿ ರಂಗ ಪದವಿಯನ್ನು ಪಡೆದು, ರಂಗದಾರ್ಶನಿಕರಾಗಿ ಮೂರು ದಶಕಗಳಿಂದ ನೂತನ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸಿದ್ದಾರೆ.
ಬಾಲ್ಯದಲ್ಲಿಯೇ ಕರಾವಳಿ ಭಾಗದ ಯಕ್ಷಗಾನ, ಭೂತಕೋಲ, ಭಜನೆ, ಅಟಿಕಳಂಜ, ಸಂಗೀತ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳನ್ನು ಕಲಿತು, ತಮ್ಮ ನೆಲದ ಸಾಂಸ್ಕೃತಿಕ ಸಂಪ್ರದಾಯಗಳ ಅನುಭವಗಳನ್ನು ರಂಗಭೂಮಿಯ ಮುಖೇನ ಹಂಚಿಕೊಂಡಿದ್ದಾರೆ. ಅವರು ನೂರಾರು ನಾಟಕಗಳಲ್ಲಿ ಕೇವಲ ನಟಿಸಿದ್ದಲ್ಲದೇ ಸುಮಾರು ಮುನ್ನೂರು ತುಳು-ಕನ್ನಡ ನಾಟಕಗಳನ್ನು ಅತ್ಯುತ್ತಮವಾಗಿ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.
'ಲೋಕಶಾಕುಂತಲ', ‘ಕರಿಯಜ್ಜನ ಕಥೆಗಳು’, 'ಧರ್ಮೇತ್ತಿ ಮಾಯೆ', 'ಹಯವದನ', 'ತಲೆದಂಡ', 'ಶಸ್ತ್ರ ಸಂತಾನ', 'ಶಸ್ತ್ರ ಪರ್ವ', 'ಅಂಧಯುಗ', 'ಪೌರುಷ ಪರ್ವ', 'ಪುಷ್ಪರಾಣಿ', 'ಸಿರಿಸಂಪಿಗೆ', 'ಪಿಲಿಪತ್ತಿಗಡಸು', 'ಮೂಜಿ ಮುಟ್ಟು ಮಾಜಿ ಲೋಕ', 'ಹುಲಿ ಹಿಡಿದ ಕನಸು' ಇವರ ಪ್ರಮುಖ ನಾಟಕಗಳು. 'ಸಾಯುವವನೇ ಚಿರಂಜೀವಿ' ಇವರು ನಟಿಸಿದ ವಿಭಿನ್ನ ಏಕವ್ಯಕ್ತಿ ನಾಟಕವಾಗಿದ್ದು, ಈ ನಾಟಕವನ್ನು ಅತಿ ಕಡಿಮೆ ಸಮಯದಲ್ಲಿ 110ಕ್ಕಿಂತ ಹೆಚ್ಚು ಪ್ರಯೋಗಗಳನ್ನು ಪ್ರದರ್ಶಿಸಿ ದಾಖಲೆ ಮಾಡಿದ್ದಾರೆ.