ಕೊರ್‍ಲಕುಂಟೆ ತಿಪ್ಪೇಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಗಡಿಗ್ರಾಮ ಕೊಡ್ಲಕುಂಟೆಯಲ್ಲಿ ನರಸಮ್ಮ ಮತ್ತು ಜೂಗಲಪ್ಪ ಎಂಬ ದಂಪತಿಗಳ ಮಗನಾಗಿ 09-09-1975ರಲ್ಲಿ ಜನಿಸಿದರು. ಎಂ.ಎ ಪದವೀಧರರಾದರೂ ವೃತ್ತಿಯಲ್ಲಿ ಪತ್ರಕರ್ತರು, ಪ್ರವೃತ್ತಿಯಲ್ಲಿ ಕವಿಗಳು ಜತೆಗೆ ಕನ್ನಡಪರ ಸಂಘಟಕರು. ಗಡಿಭಾಗದಲ್ಲಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ(ರಿ) ಸಂಘಟನೆಯೊಂದಿಗೆ ಕನ್ನಡಪರ ಸೇವೆಗಾಗಿ “ಕನ್ನಡಮನೆ” ಕಟ್ಟಿದ ನಿಷ್ಠಾವಂತ ಸೇವಕರಾಗಿ ನಾಡಿನ ನೆಲ, ಜಲ, ಭಾಷೆ ಅಸ್ಮಿತೆಯ ಉಳುವಿಗಾಗಿ ಶ್ರಮಿಸುತ್ತಿದ್ದಾರೆ. ಉಡುಪಿ ನಗರದಲ್ಲಿ 2007ರಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಇವರ ಚೊಚ್ಚಲ ಸಂಕಲನ 'ಜೇನಹನಿ'ಗೆ ಓದುಗರಿಂದ ದೊರೆತ ಪ್ರೋತ್ಸಾಹ ದಿಂದಾಗಿ, ನಂತರ 'ಮನದಾಳದ ಬಯಕೆ, ಎದೆಯ ಕದವ ತೆರೆದು' ಎಂಬ ಎರಡು ಕವನ ಸಂಕಲನಗಳನ್ನು ಸಾಹಿತ್ಯ ವಲಯಕ್ಕೆ ನೀಡುವ ಮೂಲಕ ಸಾಹಿತ್ಯಪ್ರಿಯರಿಗೆ ಮತ್ತಷ್ಟು ಹತ್ತಿರವಾದವರು.
2016 ರಲ್ಲಿ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿನ ಪ್ರಧಾನ ಕವಿಗೋಷ್ಟಿಯಲ್ಲಿ ಕವಿತೆ ವಾಚನ, 2014ರಲ್ಲಿ ಚಿತ್ರದುರ್ಗದ ಶ್ರೀ ಮುರುಘಾ ಮಠದ ಶರಣ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಾಗೇ 2014ರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ಆಡಳಿತದ ರಾಜ್ಯೋತ್ಸವ ಪ್ರಶಸ್ತಿ, ಸಂಕ್ರಮಣ ಪ್ರಕಾಶನ, ಮುದ್ದೆಬಿಹಾಳ ಶ್ರೀಗೌರಿ ಪ್ರಕಾಶನ ಸೇರಿದಂತೆ ವಿವಿಧ ಸಾಹಿತ್ಯ ವೇದಿಕೆಗಳ ಗೌರವ ಸಂದಿವೆ. ಪ್ರಸ್ತುತ ಚಳ್ಳಕೆರೆ ನಗರದಲ್ಲಿ ವಾಸವಾಗಿರುವ ಇವರು, ವಿಜಯವಾಣಿ ದಿನಪತ್ರಿಕೆಯ ತಾಲೂಕು ವರದಿಗಾರರಾಗಿ, ಸಾಹಿತ್ಯಕವಾಗಿ ತಾಲೂಕು ಮಟ್ಟದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು ಸಂಘಟನೆಯೊಂದಿಗೆ ಕನ್ನಡ ಪರಿಚಾರಕರಾಗಿ ದುಡಿಯುತ್ತಿದ್ದಾರೆ.