ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ, ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜನಿಸಿದವರು, ಗ್ರಾಮೀಣ ಬದುಕಿನ ವಿಸ್ತಾರಗಳು ಇವರ ಬರಹದ ಮೂಲಕ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು, ಕನ್ನಡ ರತ್ನ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಸೂರ್ಯ ಕೀರ್ತಿ ಅವರು ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ ಯನ್ನು ಆಸಕ್ತಿಯಿಂದ ಅಧ್ಯಯನ ಮಾಡಿ, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಈಗ ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಂಗಳೂರು ಇಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕೇಂದ್ರ ಸಾಹಿತ್ಯ ಪರಿಷತ್ತು ನಡೆಸುವ 'ಶಾಸನ ಶಾಸ್ತ್ರ'ದಲ್ಲಿ ಡಿಪ್ಲೋಮಾ ಹಾಗೂ ಬಿ ಎಂ ಶ್ರೀ ಪ್ರತಿಷ್ಠಾನ ನಡೆಸುವ ' ಹಳಗನ್ನಡ ಮತ್ತು ಶಾಸನ ಶಾಸ್ತ್ರ'ದಲ್ಲಿ ಡಿಪ್ಲೋಮಾ ಅಧ್ಯಯನ ಮಾಡಿದ್ದಾರೆ.
ಇವರ ಕವಿತೆಗಳನ್ನು ಫೇಸ್ಬುಕ್ನಲ್ಲಿ ಓದಿದಂತ ಪ್ರೊ. ಡಾ. ಟ್ಜೆಮಿನ್ ಇಶನ್ ಅವರು ಚೈನೀಸ್ ಭಾಷೆಗೆ ಅನುವಾದಿಸಿದ್ದಾರೆ, ಹಾಗೂ ತೈವಾನ್ ಮತ್ತು ಚೀನಾ ಸಾಹಿತ್ಯ ಆಸಕ್ತರು ಓದಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೆಂಗಾಲಿ ಭಾಷೆಗೆ ಸೂರಜ್ ಅವರು ಅನುವಾದಿಸಿದ್ದಾರೆ. ಹಿಂದಿಗೆ ಡಾ. ರಾಜೇಂದ್ರ ಪರದೇಸಿ ಅವರು ಅನುವಾದಿಸಿ ' ಹಿಂದಿ ಕವಿತಾ ಕೆ ಸಾತ್ ಸ್ವರ್ ' ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವರು 2022 ರಲ್ಲಿ ನಡೆದ ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಚೀನಾದ ಗಾಲಾ ವಸಂತ ಕಾವ್ಯ ಹಬ್ಬ 2023ರಲ್ಲಿ ಸೂರ್ಯಕೀರ್ತಿಯವರು ಭಾಗಿಯಾಗಿದ್ದಾರೆ. ಮತ್ತು ಚೈನೀಸ್ ಸ್ಪ್ರಿಂಗ್ ಫೆಸ್ಟಿವಲ್ ಗಾಲಾ ಆಫ್ ಪೊಯಟ್ರಿ 2023, ಈ ಕಾರ್ಯಕ್ರಮದಲ್ಲಿ ಕೊಡಮಾಡುವ ‘ಅಂತರಾಷ್ಟ್ರೀಯ ಕವಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ 'ಸಂಗಂ ಸಾಹಿತ್ಯ ಪುರಸ್ಕಾರ'ಕ್ಕೆ ಹಾಗೂ 'ಸು ರಂ ಎಕ್ಕುಂಡಿ ಕಾವ್ಯ ಪ್ರಶಸ್ತಿಗೆ' ಇವರ ‘ಮೀನು ಕುಡಿದ ಕಡಲು’ ಪುಸ್ತಕ ಕೊನೆಯ ಹಂತಕ್ಕೆ ಆಯ್ಕೆಯಾಗಿದೆ.
ತುಮಕೂರಿನ ರಾಜ್ಯ ಮಟ್ಟದ ಕವಿತೆ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. 2017ನೇ ಸಾಲಿನಲ್ಲಿ ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ " ಚೈತ್ರಾಕ್ಷಿ" ಎಂಬ ಕವಿತಾ ಸಂಕಲನ ಧನ ಸಹಾಯ ಪಡೆದುಕೊಂಡು ಲೋಕಾರ್ಪಣೆಯಾಗಿದೆ. ಈ ಪುಸ್ತಕವು 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ "ಸುಮನ್ ಸೋಮಶೇಖರ ಸೋಮವಾರ ಪೇಟೆ" ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇವರ 'ಮೀನು ಕುಡಿದ ಕಡಲು' ಹಸ್ತಪ್ರತಿಯು 'ಅಲ್ಲಮ ಕಾವ್ಯ ಪುರಸ್ಕಾರ' ಪಡೆದುಕೊಂಡಿದೆ. ಹಾಗೆ ಉತ್ತರ ಪ್ರದೇಶದಲ್ಲಿ ನೀಡುವ ‘ತಥಾಗತ ಸೃಜನ್ ಸಮ್ಮಾನ’ ಪ್ರಶಸ್ತಿ ಮುಂತಾದ ಪುರಸ್ಕಾರಗಳನ್ನು ಇವರು ಪಡೆದುಕೊಂಡಿದ್ದಾರೆ.
ಇವರ ಕವಿತೆಯು ಕನ್ನಡ ಸಾಹಿತ್ಯ ಅಕಾಡೆಮಿ ಸಂಗ್ರಹಿಸುವ ಕವಿತಾ ಸಂಕಲನ–22 ಸಂಪಾದಿತ ಕೃತಿಗೆ ಆಯ್ಕೆಯಾಗಿದೆ. ಕಾಜಾಣ ಕಾವ್ಯ ಕಮ್ಮಟ, ಎಚ್ ಎ ಎಲ್ ಕಾವ್ಯ ಸಂಭ್ರಮ, ವಿಜಯ ಕರ್ನಾಟಕ ಪತ್ರಿಕೆಯ ವಸಂತ ಕಾವ್ಯ ಸಂಭ್ರಮ, ಪ್ರಜಾವಾಣಿ ಪತ್ರಿಕೆಯ ಕವಿಗೋಷ್ಠಿ , ಅಹೋರಾತ್ರಿ ನಡೆಯುವ ಕಾಡುವ ಕಿರಂ, ಬಹುತ್ವ ಭಾರತ, ಕಾವ್ಯ ಸಂಜೆ ಇತ್ಯಾದಿ ಕಾವ್ಯ ಹಬ್ಬಗಳಲ್ಲಿ ಕವಿಯಾಗಿ ಭಾಗವಹಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಮೂರು ಮತ್ತು ನಾಲ್ಕನೆಯ ಸೆಮಿಸ್ಟರ್ BVA&BFA ಪಠ್ಯ ಪುಸ್ತಕದ ಸಂಪಾದಕರಾಗಿ, ಕನ್ನಡ ಸ್ಪರ್ಧಾ ಕೌಶಲ, ಪದವಿ ನಾಲ್ಕನೆಯ ಸೆಮಿಸ್ಟರ್ ಕನ್ನಡ ಮುಕ್ತ ಆಯ್ಕೆ ಪತ್ರಿಕೆ -9 ಪಠ್ಯ ಪುಸ್ತಕಕ್ಕೆ ಲೇಖಕರು ಹಾಗೂ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ನಿರ್ದೇಶನದ ಮೂರು ನಾಟಕಗಳು ಜಲಗಾರ, ಹೆಣದ ಬಟ್ಟೆ ಮತ್ತು ಅನಿಮಲ್ ಫಾರ್ಮ್ ರಂಗರೂಪ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಇವರು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪಾಕಶಾಸ್ತ್ರ, ಸಂಸ್ಕೃತ ಕಾವ್ಯಗಳ ಓದು, ಬೌದ್ಧಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು ಮತ್ತು ವ್ಯಾಕರಣ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಆಸಕ್ತಿಯೊಂದಿದ್ದಾರೆ. ಇವರ ವಿಮರ್ಶೆ, ಕವಿತೆ, ಕಥೆ, ಮತ್ತು ಪ್ರಬಂಧಗಳು ಪ್ರಜಾವಾಣಿ, ವಿಜಯಕರ್ನಾಟಕ, ವಾರ್ತಾಭಾರತಿ, ಅವಧಿ, ಕೆಂಡಸಂಪಿಗೆ, ಬುಕ್ ಬ್ರಹ್ಮ, ತುಷಾರ ಮುಂತಾದ ಪತ್ರಿಕೆಗಳಲಿ ಪ್ರಕಟಣೆಗೊಂಡಿವೆ. ಕನ್ನಡದ ಇ - ಪತ್ರಿಕೆಯಾದ 'ಮಿಂಚುಳ್ಳಿ' ಕನ್ನಡ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಾಶಕರು ಮತ್ತು ಸಂಪಾದಕರಾಗಿದ್ದಾರೆ.
ಇವರ ಪ್ರಮುಖ ಕೃತಿಗಳು:-
1. ಚೈತ್ರಾಕ್ಷಿ- ಕವನ ಸಂಕಲನ
2. ಮೀನು ಕುಡಿದ ಕಡಲು- ಕವನ ಸಂಕಲನ
3. ಪ್ರೇಮ ದೈವಿಕ ಪರಿಮಳ – ಕವಿತಾ ಸಂಕಲನ
4. ಕಿರಂ ಹೊಸ ಕವಿತೆ 2023 - ಸಂಪಾದಿತ ಕೃತಿ
5. Love is a divine fragrance- An Anthology of Gender issues – Editor
6. Multilingual in language and literature – An International Conference – Editor