ಕೆ.ಎಸ್. ಪರಮೇಶ್ವರ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪದವಿ ಪಡೆದಿದ್ದಾರೆ. ರಂಗಭೂಮಿಯ ಹಿನ್ನೆಲೆ ಇರುವ ಪರಮೇಶ್ವರ್ ಸುಮಾರು 12 ವರ್ಷಗಳಿಂದ ನಟನೆ, ನಿರ್ದೇಶನ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಸಂಘಟನೆ ಹೀಗೆ ರಂಗಭೂಮಿಯ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2010-2011ನೇ ಸಾಲಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ(National School of Drama) ಬೆಂಗಳೂರು ಅಧ್ಯಾಯದಿಂದ ರಂಗಭೂಮಿ ಕುರಿತು ಅಧ್ಯಯನ ಮಾಡಿದ್ದಾರೆ. ಕಾನೂರು ಹೆಗ್ಗಡತಿ, ಸಿರಿಸಂಪಿಗೆ, ಕಥನ, ಮಿಸ್.ಸದಾರಮೆ, ಕಥೆ ಹೇಳ್ತೀವಿ, ಶಾಂಡಿಲ್ಯ ಪ್ರಹಸನ, ಚೆರಿ ಆರ್ಚರ್ಡ್, ಉತ್ತರರಾಮ ಚರಿತೆ, ಪ್ರಮೀಳಾರ್ಜುನೀಯಂ, ನಾಯಿಕಥೆ, ಸೇವಂತಿ ಪ್ರಸಂಗ, ಚಿರಕುಮಾರ ಸಭಾ, ವಿಶಾಕೇ, ಮಾಸ್ತಿಕಲ್ಲು ಹೀಗೆ ಸುಮಾರು 20 ನಾಟಕಗಳಲ್ಲಿ ನಟನೆ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ, ಸಂಘಟನೆ ಮೊದಲಾದ ವಿಭಾಗಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ. ಹಲವು ಮಕ್ಕಳ ನಾಟಕಗಳ ನಿರ್ದೇಶನ, ಜೊತೆಗೆ ಹಲವಾರು ಅಭಿನಯ, ನಿರ್ದೇಶನ, ಸಂವಹನ ಕಲೆ ಕುರಿತಾದ ಕಮ್ಮಟಗಳ ಆಯೋಜನೆ ಹಾಗೂ ನಿರ್ದೇಶಿಸಿದ್ದಾರೆ.
ನಾಲ್ಕು ವರ್ಷಗಳಿಂದ ಸಿನಿಮಾ ಕ್ಷೇತ್ರದತ್ತ ಆಸಕ್ತರಾಗಿರುವ ಅವರು 2012ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ನಡೆಯುವ ಚಿತ್ರಕಥೆ ರಚನಾ ಶಿಬಿರದಲ್ಲಿ ಪಾಲ್ಗೊಂಡು ಚಿತ್ರಕಥೆ ರಚನ ವಿಧಾನ ಅಭ್ಯಾಸ, ಕನ್ನಡದ ಕೆಲವು ಚಲನಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. ಜೊತೆಗೆ ಟೋನಿ, ಸವಾರಿ-2, ದಕ್ಷ, ಜುಗಾರಿ, ವೀರಗಾಥೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅಮರಾವತಿ, ಬ್ಯೂಟಿಫುಲ್ ಮನಸುಗಳು, ಬಬ್ಲೂಷ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಕನ್ನಡದಲ್ಲಿ ಅತಿ ಅಪರೂಪದ ಕೆಲವು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ನಿರ್ದೇಶಿಸಿದ್ದ ಮತ್ತೆ ಮತ್ತೆ ತೇಜಸ್ವಿ, ಸಿದ್ಧಗಂಗಾ ಮಠದ ಶ್ರೀ. ಶಿವಕುಮಾರ ಸ್ವಾಮೀಜಿಯವರ ಕುರಿತಾದ ಲೋಕ ಜಂಗಮ, ಹತ್ಯೆಗೀಡಾದ ಕನ್ನಡದ ಶ್ರೇಷ್ಠ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿಯವರ ಕುರಿತಾದ ಮಾರ್ಗಕ್ಕೆ ಕೊನೆಯಿಲ್ಲ ಎಂಬ ಮಹತ್ವದ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಕ್ಷೇತ್ರಗಳನ್ನು ಆರಿಸಿಕೊಂಡಿರುವ ಪರಮೇಶ್ವರ್ ಅವರು ಸಾಧ್ಯವಾದಷ್ಟು ಊರೂರು ತಿರುಗುತ್ತಾ ಹೊಸ ಅನುಭವಗಳಿಗೆ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದನ್ನೇ ತಮ್ಮ ಹವ್ಯಾಸವೆನ್ನುತ್ತಾರೆ. ಜೊತೆಗೆ ಸಾಹಿತ್ಯದ ಓದು ಮತ್ತು ಬರವಣಿಗೆಯನ್ನು ಮೆಚ್ಚಿನ ಹವ್ಯಾಸವಾಗಿಸಿಕೊಂಡಿರುವ ಅವರು ಸಮಾನ ಆಸಕ್ತರ ಜೊತೆಗೂಡಿ ಕಲಾಮಾಧ್ಯಮ ಎಂಬ ಸಂಸ್ಥೆ ಕಟ್ಟಿಕೊಂಡು ನಾಟಕ, ನಟನೆ, ನಿರ್ದೇಶನಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಅದೇ ಸಂಸ್ಥೆಯ ಮೂಲಕ ಸಾಕ್ಷ್ಯಚಿತ್ರಗಳು, ಜಾಹೀರಾತುಗಳು, ಕಾರ್ಪೋರೇಟ್ ವಿಡಿಯೋಗಳು, ಯೂಟ್ಯೂಬ್ ವಿಡಿಯೋಗಳು ಮೊದಲಾದ ಮೀಡಿಯಾ ಸಂಬಂಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರ ಅಭಿನಯ ಶಾಲೆಯಲ್ಲಿ ಅಭಿನಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ತೇಜಸ್ವಿ ಸಿಕ್ಕರು’ ಇವರು ಸಂಪಾದಿಸಿ ಪ್ರಕಟಿಸಿರುವ ಕೃತಿ.