ಭೂಗೋಳ ಶಾಸ್ತ್ರಜ್ಞ ಕೆ.ಆರ್. ರಂಗಾಚಾರ್ ಅವರು ಚಿಕ್ಕಬಳ್ಳಾಪುರದ ಬಳಿಯ ನೊಳಕುಂಟೆ ಹೊಸೂರಿನವರು. (ಜನನ: 08-05-1929). ತಂದೆ ರಘುನಾಥಾಚಾರ್, ತಾಯಿ ಇಂದಿರಮ್ಮ. ಇವರ ಕಾವ್ದನಾಮ ರಘುಸುತ. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವೀಧರರು. ಟೀಚರ್ಸ್ ಕಾಲೇಜಿನಿಂದ ಬಿ.ಎಡ್ ಪದವೀಧರರು. ಮಿರ್ಲೆ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. 100ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವರ ಮೊದಲ ಕಾದಂಬರಿ ಆಶಾನಿರಾಶ (1924) ಪ್ರಕಟಗೊಂಡಿತ್ತು. ಪೊಯ್‌ಸಳ, ಮೀರ್ ಸಾದಿಕ್, ಸುಳಿಗಾಳಿ ಸಹ ಕಾದಂಬರಿಗಳು.
‘ಗಗನ ಕುಸುಮ’ ಎಂಬುದು ವೈಜ್ಞಾನಿಕ ಕಾದಂಬರಿ. ‘ಮೇಸ್ಟ್ರಚೀಲ’ ಎಂಬುದು ನಗೆಕಾದಂಬರಿ. ‘ಪತ್ತೇದಾರ’ ಕಾವ್ಯನಾಮದಲ್ಲಿ ಪತ್ತೆದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಲಾಯರ್ ರಾದ್ಧಾಂತ, ರಿಹರ್ಸಲ್ ಗಡಿಬಿಡಿ, ಅಲಾಲ್‌ಟೋಪಿ, ತಿಪ್ಪರಲಾಗ, ಎಡಬಿಡಂಗಿ, ಪ್ರಾಕ್ಟೀಶ್ ಪರದಾಟ, ಚೀಟಿಕಾಟ, ಹನಿಮೂನ್, ಭಂಡರಬೇಸ್ರು, ಗಣೇಶಮಹಿಮೆ, ಗಲಾಟೆಮದುವೆ ಹೀಗೆ 3ಕ್ಕೂ ಅಧಿಕ ನಾಟಕಗಳ ರಚನೆ, ‘ನಮ್ಮ ಕಲಾವಿಲಾಸಿ ನಾಟಕ ಸಂಸ್ಥೆಗಳು’ ಶೀರ್ಷಿಕೆಯಡಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ನಾಟಕಗಳನ್ನು ಪ್ರಕಟಿಸಿದ್ದರು.
‘ವಿಜಯನಗರ ಸಾಮ್ರಾಜ್ಯದ ಭೂಗೋಳ ವಿಜ್ಞಾನ’ ಇವರ ಸಂಶೋಧನಾ ಪ್ರಬಂಧ. ವಿದ್ಯಾರ್ಥಿಗಳಿಗಾಗಿ ‘ಸುಲಭಭೂಗೋಳ’ ಕೃತಿ. ‘ಸಮಾಜ ದರ್ಶನ’ ಕೃತಿಗಳ ರಚಿಸಿದ್ದಾರೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ‘ಮೈಸೂರು’ ವೈಶ್ಯ ಪತ್ರಿಕೆ’ಯ ಸಹಸಂಪಾದಕರಾಗಿದ್ದರು. ನಾಡಿನ ವಿವಿಧ ಪತ್ರಿಕೆಗಳಿಗೆ ವ್ಯಕ್ತಿ ಚಿತ್ರಣಗಳನ್ನು ಬರೆದಿದ್ದಾರೆ. ಎಚ್.ಎಲ್.ಎನ್. ಸಿಂಹರವರ ‘ಅಬ್ಬಾ ಆ ಹುಡುಗಿ’ ಚಲನಚಿತ್ರಸಾಹಿತಿಯಾಗಿದ್ದರು. ‘ಗೌರಿ ಮಹಾತ್ಮೆ’ ಚಿತ್ರದ ಸಂಭಾಷಣಕಾರರಾಗಿದ್ದರು.
ಪಠ್ಯಪುಸ್ತಕ ರಚನಾಸಮಿತಿ, ಪಾಠಕ್ರಮ ವಿಷಯಗಳ ಪುನರ್ ರಚನೆ, ಪಠ್ಯಪುಸ್ತಕ ಪುನರ್ ವಿಮರ್ಶಾಸಮಿತಿ, ಎನ್.ಸಿ.ಇ. ಆರ್.ಟಿ ಮತ್ತು ಡಿ.ಎಸ್.ಇ.ಆರ್.ಟಿ ಗಳ ಪಠ್ಯಕ್ರಮ ಕಾರ್ಯಾಗಾರಗಳ ಸಲಹಾಗಾರರಾಗಿದ್ದರು. ‘ಉತ್ತಮ ಉಪಾಧ್ಯಾಯ ಪ್ರಶಸ್ತಿ’ ಲಭಿಸಿದೆ. 25 ಕಾದಂಬರಿ, ೩೩ ನಾಟಕಗಳು, 21 ಭೂಗೋಳ ಮತ್ತು ಸಮಾಜ ವಿಜ್ಞಾನ ಕೃತಿಗಳು, 3 ಕವನ ಸಂಕಲನಗಳು, 7 ಶಿಶು ಸಾಹಿತ್ಯ, 4 ಜೀವನ ಚರಿತ್ರೆಗಳು ಮತ್ತು ಪ್ರಬಂಧ, ಕಥಾ ಸಂಕಲನಗಳು, ಸಂಪಾದಿತ ಕೃತಿಗಲೂ ಸೇರಿವೆ. 23-01-2003 ರಂದು ನಿಧನರಾದರು.