ಲೇಖಕ, ಪ್ರಕಾಶಕರಾದ ಅನಂತರಾಮುರವರು ಜನಿಸಿದ್ದು 1947 ಅಕ್ಟೋಬರ್ 25ರಂದು. ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆಯವರು. ತಂದೆ ಎನ್.ಎಸ್. ಕೃಷ್ಣಪ್ಪ, ತಾಯಿ ಸುಬ್ಬಲಕ್ಷ್ಮಮ್ಮ. ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಅನಂತಪುರಂ ಡಿಪೋವಿನಲ್ಲಿ ವೃತ್ತಿ ಆರಂಭಿಸಿದ ಇವರು ಅಧ್ಯಾಪಕರಾಗಬೇಕೆಂಬ ಆಸೆಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು.
ಇವರ ಪ್ರಮುಖ ಕೃತಿಗಳೆಂದರೆ ದೇವ ಬಿನ್ನಪ, ಉದಯ ರವಿ ನಾಡಿನಲ್ಲಿ (ಜಪಾನ್ ಪ್ರವಾಸ ಕಥನ). ಸಕ್ಕರೆಯ ಸೀಮೆ (ಮಂಡ್ಯ ಜಿಲ್ಲೆಯ ಪ್ರವಾಸಕಥನ). ದಕ್ಷಿಣದ ಸಿರಿನಾಡು (ಸಮಗ್ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕಥನ). ಕವಿಬ್ರಹ್ಮಶಿವ (ಪಿಎಚ್.ಡಿ. ಮಹಾಪ್ರಬಂಧ). ದಕ್ಷಿಣದ ಸಿರಿನಾಡು, ದೇವರದಾಸಿಮಯ್ಯ ಮುಂತಾದವು.
ಇವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಲೇಖಕಿಯ ಪರಿಷತ್ತಿನ ರನ್ನ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.