About the Author

ಜಿನದತ್ತ ದೇಸಾಯಿ ಅವರು ಮೂಲತಃ ಧಾರವಾಡ ಜಿಲ್ಲೆಯ (ಜನನ: 03-04-1933) ಅಮ್ಮಿನಭಾವಿಯವರು. ತಂದೆ ಗುಂಡಪ್ಪ ದೇಸಾಯಿ.ತಾಯಿ ಅಮ್ಮಕ್ಕ. ಜಮೀನುದಾರ ನೇಮಣ್ಣ ದೇಸಾಯಿ-ಜಾನಕಿಬಾಯಿ ದಂಪತಿ ಇವರನ್ನು ದತ್ತು ಪಡೆದರು. ಸ್ವಗ್ರಾಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನವಲಗುಂದದಲ್ಲಿ  ಹೈಸ್ಕೂಲ್ ಹಾಗೂ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ ಎ ಹಾಗೂ  ಧಾರವಾಡದ ಜೆಎಸ್ಎಸ್ ಕಾಲೇಜ್ ನಲ್ಲಿ ಎಲ್ ಎಲ್ ಬಿ ಪೂರೈಸಿದರು. ಇವರು ಡಾ.ವಿ.ಕೃ.ಗೋಕಾಕರ ಶಿಷ್ಯರು. ವಿದ್ಯಾರ್ಥಿ ಜೀವನದಲ್ಲಿ  ಅವರು "ನೀಲಾಂಜನ" ಕವನ ಸಂಕಲನ ಪ್ರಕಟಿಸಿದ್ದರು. 

ಬೆಳಗಾವಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಸಹಾಯಕ ಸರ್ಕಾರಿ  (1962 ರಲ್ಲಿ)  ಜಿಲ್ಲಾ ಅಭಿಯೋಜಕರಾಗಿ, ಮುನ್ಸೀಫ್ ಮ್ಯಾಜಿಸ್ಟ್ರೇಟ್ಆ ನಂತರ 1966ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ, 1991ರಲ್ಲಿ ನಿವೃತ್ತರಾದರು. ಬೆಳಗಾವಿ  ಖಾಯಂ ಜನತಾ  ನ್ಯಾಯಾಲಯ ಅಧ್ಯಕ್ಷರು, ನ್ಯಾಯಾಧೀಶ ರಾಗಿದ್ದರು.  ಉತ್ತಮ ಕವಿಗಳು. ಸಾಹಿತಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕವನ ಸಂಕಲನಗಳು: ನೀಲಾಂಜನ, ಮಧುಶಾಲಿನಿ, ಮತ್ತೆ ಬಂದಿದ್ದೇನೆ,ಮಾಗಿ, ಮಾಗಿಯ ಮೊದಲು, ಒಳಗಿನ ಮಳೆ, ಬೊಗಸೆಯಲ್ಲಿ ಬೆಳಕು, ಹೆಜ್ಜೆ ಸಾಲು, ಜಿನದತ್ತ ದೇಸಾಯಿ ಸಮಗ್ರಕಾವ್ಯ, ಜಿನದತ್ತ ಚುಟುಕಗಳು, ಜಗದಗಲ ಮುಗಿಲಗಲ, ಕಡೆಗೋಲು, ಜಿನದತ್ತ ಆಯ್ದ ಕವಿತೆಗಳು, ಗಾಂಧಿನಗರ, ಸಹಸ್ರಚಂದ್ರ, ಅಮೋಘ ಹೀಗೆ 18ಕ್ಕೂ ಕವನ ಸಂಕಲನಗಳು ಪ್ರಕಟಿಸಿದ್ದಾರೆ. 

ಸಂಪಾದನೆ ಗ್ರಂಥಗಳು:  ಚಂದ್ರಾಭಿನಂದನೆ,ಸ್ನೇಹ ಸೌರಭ, ಜ್ಞಾನಿ ವಿಜ್ಞಾನಿ, ಕಾವ್ಯಾಭಿಷೇಕ, ಸವ್ಯಸಾಚಿ, ಉದಯ ಮತ್ತು ಯುವ ಸಾಹಿತಿಗಳ ಕತೆ ಕವನ, ಮಧು ಸಂಗಮಗಳನ್ನು ಸಂಪಾದಿಸಿದ್ದಾರೆ. ಇವರ ಬದುಕು-ಬರಹ ಕುರಿತು ಆರು ಕೃತಿಗಳು ಹೊರ ಬಂದಿವೆ .ಗುಣಾರ್ಣವ, ಜಿನದತ್ತ ದೇಸಾಯಿ ಕಾವ್ಯಾವಲೋಕನ, ಜಿನದತ್ತ ದೇಸಾಯಿಯವರ ಚುಟುಕು ಸಾಹಿತ್ಯ (ಎಂಫಿಲ್) ಅವರ ಕಾವ್ಯ,ತುಂಬಿದ ಕೊಡ , ಬೀಗಿ ಬೆಳೆದ ಬಾಳೆ ಮುಂತಾದ ಗ್ರಂಥಗಳು.

ಸಂಘ ಸಂಸ್ಥೆಗಳ ಒಡನಾಟ: ನ್ಯಾ. ಎಸ್. ರಾಜೇಂದ್ರ ಬಾಬು ಅಧ್ಯಕ್ಷತೆಯ ಕರ್ನಾಟಕ ಗಡಿ ಸಂರಕ್ಷಣಾ ಆಯೋಗದ ಸದಸ್ಯರು, ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು, ಬೆಳಗಾವಿ ಸಂಗೀತ ವೇದಿಕೆ ಅಧ್ಯಕ್ಷರು, ಕವಿಗೋಷ್ಠಿಗಳ ಸಂಯೋಜಕರು ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಒಡನಾಟವಿದ್ದವರು. 

ಪ್ರಶಸ್ತಿಗಳು: 2017 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಚುಟುಕು ಸಾಹಿತ್ಯ ಪರಿಷತ್, ಚುಟುಕು ಭೂಷಣ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಗೋಮಟೇಶ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ , ಜೀವಮಾನ ಸಾಧನೆಗಾಗಿ ಪ್ರಶಸ್ತಿ, ನ್ಯಾಯಾಂಗ ಇಲಾಖೆಯಲ್ಲಿ  ಕನ್ನಡದಲ್ಲಿ ಅತ್ಯುತ್ತಮ ತೀರ್ಪು ನೀಡುವ ಪ್ರಶಸ್ತಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 2018 ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ದಾನಿಗಳು: ಭರತೇಶ ಶಿಕ್ಷಣ ಸಂಸ್ಥೆಗೆ 15 ಲಕ್ಷ ರೂ. ಗಳನ್ನು ನೀಡಿದ್ದಾರೆ. ತಮ್ಮ 81 ನೇ ಹುಟ್ಟು ಹಬ್ಬದ ನಿಮಿತ್ತ ಆ ಸಂಸ್ಥೆಗೆ 81 ಸಾವಿರ ರೂ.ಗಳನ್ನು ನೀಡಿದ್ದು, ತಮಗೆ ಎಷ್ಟು ವಯಸ್ಸೋ ಅಷ್ಟೇ ಸಾವಿರ ರೂ.ಗಳ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ 25 ಲಕ್ಷ ರೂ. ನೀಡಿ, ರಜತ ಮಹೋತ್ಸವ ಸ್ಮಾರಕ ಭವನ ನಿರ್ಮಿಸಿದ್ದಾರೆ. ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾ.ಆ. ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರ ಆರಂಭಿಸುವಲ್ಲಿ ಇವರದು ಪ್ರಮುಖ ಪಾತ್ರವಿದೆ. 

ಜಿನದತ್ತ ದೇಸಾಯಿ

(03 Apr 1933)

BY THE AUTHOR