ಈಶ್ವರಚಂದ್ರ ಅಮಗೌಡ ಚಿಂತಾಮಣಿ ಅವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜ್ಜರಗಿಯಲ್ಲಿ 10-05-1926 ರಲ್ಲಿ ಜನಿಸಿದರು. ತಂದೆ ಅಮಗೌಡ ಸೋಮಲಿಂಗ ಚಿಂತಾಮಣಿ, ತಾಯಿ ನಾಗಮ್ಮ. 1942ರ ಚಲೇಜಾವ್ ಚಳವಳಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳೊಡನೆ ಜೈಲು ಸೇರಿದರು.
ಇವರ ಕಾವ್ಯನಾಮ “ಪಾರ್ವತೀಶ”. ತಮ್ಮ ಸ್ವಂತ ಊರಿನಲ್ಲಿ ಸ್ತ್ರೀಯರು ಹಾಡುವ ಸಂಪ್ರದಾಯದ ಹಾಡುಗಳಿಂದ ಆಕರ್ಷಿತರಾದರು. ಜನಪದ ಹಾಡುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡರು. 1946 ರಿಂದಲೇ ಜನಪದ ಸಾಹಿತ್ಯ ಕುರಿತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದರು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. 1954 ರಲ್ಲಿ ಜಮಖಂಡಿಯ ಕರ್ನಾಟಕ ಸಾಹಿತ್ಯ ಮಂದಿರದಿಂದ ‘ಗರತಿಯರ ಮನೆಯಿಂದ’ ಎಂಬ ಜಾನಪದ ಗ್ರಂಥ ಪ್ರಕಟವಾಯಿತು.ಜಾನಪದ ಇತರ ಅಂಗಗಳಾದ ಗಾದೆ, ಒಗಟು, ಒಡಪು, ಚುಕ್ಕೋಳ ಆಟಪಾಟ ಇತ್ಯಾದಿ ವಿಷಯಗಳು ಇದರಲ್ಲಿ ದಾಖಲಾಗಿವೆ. ಈ ಗ್ರಂಥಕ್ಕೆ ಜಾನಪದ ಅಕಾಡೆಮಿಯ ಪ್ರಶಸ್ತಿ ಕೂಡ ಬಂದಿದೆ. ಒಡಪುಗಳು (1976, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ಜ್ಯೋತಿಯೇ ಆಗು ಜಗಕ್ಕೆಲ್ಲ (1980) ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಬರೆದಿದ್ದಾರೆ. ಬಸವಣ್ಣನವರು, ಯುಗಪುರುಷ ಗಾಂಧೀಜಿ, ಮಾದರಿ ಮಲ್ಲಣ್ಣ, ಜನಪ್ರಿಯ ರಾಮಾಯಣ, ಬಾಳಿನ ಬೆಳಕು, ಮಹಾಭಾರತ ದರ್ಶನ, ಕರ್ನಾಟಕದ ಕಥೆಗಳು, ಪೌರಾಣಿಕ ಕೃತಿಗಳಾದ ನಳ ದಮಯಂತಿ, ಸಾವಿತ್ರಿ ಸೌಭಾಗ್ಯ, ಸತ್ಯ ಹರಿಶ್ಚಂದ್ರ , ಜಾನಪದ ಕೃತಿಗಳಾದ ಗರತಿಯ ಮನೆಯಿಂದ ಮತ್ತು ಒಡಪುಗಳು, ಭಾಗ್ಯದ ಬಾಗಿಲು, ಪುಣ್ಯ ಪುರುಷ – ಕಾದಂಬರಿಗಳು. ಭಾಗ್ಯದ ಬಾಗಿಲು, ತೆರೆದಿಟ್ಟ ಪುಸ್ತಕ, ಊರ ಉಸಾಬರಿ, ನಂದಾದೀಪ, ಯಾರತಪ್ಪು, ಮೊದಲಾದ 20ಕ್ಕೂ ಹೆಚ್ಚು ರೇಡಿಯೋ ನಾಟಕಗಳು,; ಬಂಥನಾಳದ ಬೆಳಕು, ಕಾಯಕವೇ ಕೈಲಾಸ, ಕರ್ನಾಟಕ ಕಣ್ಮಣಿಗಳು, ನೆಹರು ದರ್ಶನ, ನನ್ನ ಮನೆ ಅಸ್ಸಾಂ ಮೊದಲಾದ ಮಕ್ಕಳ ಸಾಹಿತ್ಯ, ಭಕ್ತಾನುರಾಗಿ ಬಂಥನಾಳ ಶಿವಯೋಗಿ, ಅನುಭಾವ ಚಿಂತಾಮಣಿ, ಧರ್ಮದರ್ಶನ, ಪ್ರಸಾರವಾಣಿ, ಪ್ರಾರ್ಥನಯೋಗ ಮುಂತಾದ ಅಧ್ಯಾತ್ಮಿಕ ಗ್ರಂಥಗಳೂ ಸೇರಿ ಸುಮಾರು 50ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ (1974) ಜಾನಪದ ಅಕಾಡೆಮಿ ಪ್ರಶಸ್ತಿ (1980) ಭಾರತ ಸರ್ಕಾರದಿಂದ ಫೆಲೋಶಿಪ್ (1999) ಸಮೀರವಾಡಿಯಲ್ಲಿ 1997 ರಲ್ಲಿ ಜರುಗಿದ ವಿಜಾಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, 1998 ರಲ್ಲಿ ವಂದೇ ಮಾತರಂ ಗ್ರಂಥಕ್ಕೆ ಗೋರೂರು ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಕೂಡಲ ಸಂಗಮ ಮತ್ತು ಭಾಗ್ಯದ ಬಾಗಿಲು ಕೃತಿಗಳಿಗೆ ನವ ಸಾಕ್ಷರ ರಾಷ್ತ್ರ ಪ್ರಶಸ್ತಿ, ‘ಕಾಯಕವೇ ಕೈಲಾಸ’ ಕೃತಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಪುರಸ್ಕಾರ, ಮುಳವಾಡದಲ್ಲಿ ನಡೆದ 4ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ‘ಜಾನಪದ ಜ್ಯೋತಿ ಕೃತಿಗೆ’ ಹರ್ಡೇಕರ ಮಂಜಪ್ಪ ಪ್ರಶಸ್ತಿ, ‘ಭಕ್ತಾನುರಾಗಿ ಬಂಥನಾಳ ಶಿವಯೋಗಿ’ ಗ್ರಂಥಕ್ಕೆ ಇಳಕಲ್ಲ ವಿಜಯ ಮಹಾಂತೇಶ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಅಭಿಮಾನಿಗಳು 2005ರಲ್ಲಿ ಅರ್ಪಿಸಿದ ಗೌರವ ಗ್ರಂಥ 'ಚಿಂತಾಮಣಿ'.