ನಾಟಕಕಾರ, ಕವಿ, ಹಾಗೂ ಚಿತ್ರ ಸಾಹಿತಿ ಹೆಚ್.ಕೆ. ಯೋಗಾನರಸಿಂಹ ಅವರು ಮೂಲತಃ ಹಳೇಬೀಡಿನವರು. ಅವರ ತಂದೆ ಕೃಷ್ಣಶಾಸ್ತ್ರಿಗಳು ಪುರಾಣಗಳ ವ್ಯಾಖ್ಯಾನಕಾರರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ (1983) ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ (1996), ಗುಬ್ಬಿವೀರಣ್ಣ ಪ್ರಶಸ್ತಿ (1999) ದೊರೆತಿವೆ. ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿರುವ ಯೋಗಾನರಸಿಂಹ ಅವರು ಚಿತ್ರ ನಿರ್ದೇಶಕರೂ ಹೌದು. ಹಿರಣ್ಯಯ್ಯ ಮಿತ್ರ ಮಂಡಲಿಯಲ್ಲಿದ್ದ ಅವರು ರಾಜಾವಿಕ್ರಮ, ಚಂದ್ರಹಾಸ, ಬಿಕನಾಸಿ, ಶ್ರೀಮದ್ರಮಾರಮಣಗೊವಿಂದ ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ’ಸರ್ವೋದಯ ನಾಟಕ ಮಂಡಲಿ' ಆರಂಭಿಸಿ ನಷ್ಟ ಅನುಭವಿಸಿದ ಅವರ 'ಚಿ-ಕಳ್ಳಭಟ್ಟಿ' ಅತ್ಯಂತ ಯಶಸ್ವಿ ನಾಟಕ ಆಗಿತ್ತು. 'ಶುಭಮಂಗಳ' ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಸಿನಿಮಾರಂಗಕ್ಕೆ ಬಂದ ಅವರು ಹಲವು ಚಿತ್ರಗಳ ಯಶಸ್ಸಿಗೆ ತಮ್ಮದೇ ಕೊಡುಗೆ ನೀಡಿದ್ದರು. ಜನಪ್ರಿಯ ಚಿತ್ರ 'ರಂಗನಾಯಕಿ' ಗೂ ಸಂಭಾಷಣೆ ರಚಿಸಿದ್ದರು.