ಗ್ರಾಮ ಕೇಂದ್ರಿತ ಕತೆಗಳನ್ನು ಕಟ್ಟುವ ಕತೆಗಾರ ಗುರುನಾಥ ಅಕ್ಕಣ್ಣನವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದವರು.( ಜನನ: 28-12-1963). ತಂದೆ ಕಾಶಪ್ಪಾ ತಾಯಿ ಬಸಮ್ಮಾ ಅಕ್ಕಣ್ಣನವರ. ತಮ್ಮ ಪ್ರಾಥಮಿಕ ಹಾಗೂ ಹೈಸ್ಕೂಲ ಶಿಕ್ಷಣವನ್ನು ಗೋರ್ಟಾದಲ್ಲಿ ಮುಗಿಸಿ ಮುಂದೆ ಬೀದರ ಸರ್ಕಾರಿ ತಾಂತ್ರಿಕ ಶಿಕ್ಷಣಾಲಯದಿಂದ ಸಿವಿಲ್ ಇಂಜಿನೀಯರಿಂಗ್‌ನಲ್ಲಿ ಪದವಿಯನ್ನು ಪಡೆದರು. ರಾಜ್ಯ ಮಟ್ಟದಲ್ಲಿ ಒಳ್ಳೆಯ ಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. 1990ರಲ್ಲಿ ‘ಯಾರನ್ನು ಪ್ರೀತಿಸ ಬೇಡ’, 1996ರಲ್ಲಿ ‘ಇದು ಎಂಥಾ ಲೋಕವಯ್ಯ' ಹಾಗೂ 2009 ರಲ್ಲಿ 'ಕಲ್ಲಣ್ಣನ ಕಾಂಪ್ಲೆಂಟ್ ಪ್ರಕರಣ ಮತ್ತು ಇತರ ಕತೆಗಳು' ಅವರ ಮೂರು ಕಥಾ ಸಂಕಲನಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 1990 ರಲ್ಲಿ ನಡೆಸಿದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಅವರ ‘ಕಲ್ಲಣ್ಣನ ಕಾಂಪ್ಲೇಂಟ್ ಪ್ರಕರಣ' ಕತೆಗೆ ಬಹುಮಾನ, 2001 ಹಾಗೂ 2004 ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಜಯತೀರ್ಥ ರಾಜ ಪುರೋಹಿತ ದತ್ತಿ ನಿಧಿ ಕಥಾ ಸ್ಪರ್ಧೆಯಲ್ಲಿ ಇವರ “ನೀ ಮಾಯೆಯೊಳಗೋ-ನಿನ್ನೊಳು ಮಾಯೆಯೋ” “ಭವದ ಬೀಜ' ಕತೆಗಳಿಗೆ ಬಹುಮಾನ ಲಭಿಸಿವೆ.
ಇವರ 'ಸಿಲು ಬೆಳದಿಂದಳು' ಕತೆಯು ಮಲೆಯಾಳಂ ಭಾಷೆಗೆ ಹಾಗೂ ಇವರ ನಾಲ್ಕು ಕತೆಗಳು ಮರಾಠಿ ಹಾಗೂ ಒಂದು ಕತೆ ಹಿಂದಿಗೆ ಅನುವಾದಗೊಂಡಿವೆ. ಇವರ ‘ಆಯ್ಕೆ' ಕತೆಯು ಬೆಂಗಳೂರು ದೂರದರ್ಶನದಿಂದ ಧಾರವಾಹಿಯಾಗಿ ಪ್ರಕಟವಾಗಿದೆ. ಬೀದರ ಜಿಲ್ಲೆಯ ಬರಹಗಾರರು ಮತ್ತು ಕಲಾವಿದರ ಸಂಘವನ್ನು ಸ್ಥಾಪಿಸಿದ್ದು, 2004 ರಿಂದ 2007 ರ ವರೆಗೆ ಬೀದರ ತಾಲೂಕಿನ ಕಸಾಪ ಅಧ್ಯಕ್ಷರಾಗಿದ್ದರು.