About the Author

ಲೇಖಕಿ ಎಸ್ತರ್‌ ಅನಂತಮೂರ್ತಿ ಅವರು ಹಾಸನದವರು. (ಜನನ: 1940 ನವೆಂಬರ್‌ 22 ). ತಂದೆ ಆನಂದ ಕೃಷ್ಣಪ್ಪ ಮತ್ತು ತಾಯಿ ಫ್ರೀಡಾ. ಆರಂಭಿಕ ಶಿಕ್ಷಣವನ್ನು ಹಾಸನದಲ್ಲಿ ಮುಗಿಸಿ ನಂತರ ಬೆಂಗಳೂರಿನಲ್ಲಿ, 1960ರಲ್ಲಿ ಕಾಲೇಜು ಓದುತ್ತಿರುವಾಗ ಯು.ಆರ್‌. ಅನಂತಮೂರ್ತಿಯವರನ್ನು ಮದುವೆಯಾದರು. ಅನಂತಮೂರ್ತಿಯವರು ಕಾಮನ್‌ವೆಲ್ತ್ ಸ್ಕಾಲರ್‌ಶಿಪ್‌ ಪಡೆದು ಸಂಶೋಧನ-ಅಧ್ಯಯನಕ್ಕೆಂದು ಇಂಗ್ಲೆಂಡ್‌ಗೆ ಹೋದಾಗ ಅವರ ಜೊತೆಗೆ ಹೋದರು. ಅಲ್ಲಿ,  ಬರ್ಮಿಂಗಹ್ಯಾಮ್ ಟೆಕ್ನಿಕಲ್‌ ಕಾಲೇಜಿನಲ್ಲಿ ಕೆಲವು ಕಾಲ ಲ್ಯಾಬ್‌ ಟೆಕ್ನೀಶಿಯನ್‌ ಆಗಿ ದುಡಿದರು. ಮೈಸೂರಿಗೆ ಮರಳಿದ ಬಳಿಕ ಶಾರದಾ ವಿಲಾಸ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿ, ನಂತರ ಬಿ.ಎಡ್‌. ಮತ್ತು ಎಂ.ಎಡ್‌ ಪದವಿಯನ್ನೂ ಪಡೆದರು. ಮೈಸೂರಿನ ರಾಯಲ್‌ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಅಧ್ಯಾಪನ ವೃತ್ತಿಜೀವನ ಆರಂಭಿಸಿ ಮುಂದೆ ಮಾನಸಗಂಗೋತ್ರಿಯ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತವನ್ನು ಹದಿನೆಂಟು ವರ್ಷ ಬೋಧಿಸಿದರು. ಅದೇ ಸಂಸ್ಥೆಯಲ್ಲಿ, ಕೆಲ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿರುತ್ತಾರೆ.. ಸಂಗೀತ ಮತ್ತು ನಾಟಕಗಳಲ್ಲಿ ಆಸಕ್ತಿ ಇರುವ ಎಸ್ತರ್, ಮೈಸೂರಿನ ಸಮತೆಂತೋ ನಾಟಕ ತಂಡದ ಸಕ್ರಿಯ ಸದಸ್ಯೆಯಾಗಿ ‘ಕಾಡುಪ್ರಾಣಿ’, ‘ಆವಾಹನೆ’, ‘ತಾಯಿ’, ‘ಘಾಸೀರಾಂ ಕೋತ್ವಾಲ್‌’ ಮುಂತಾದ ನಾಟಕಗಳಲ್ಲಿ ನಟಿಸಿರುತ್ತಾರೆ. ಎಸ್ತರ್‌ ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಕೆಲವು ಮಕ್ಕಳ ಪುಸ್ತಕಗಳು ಪ್ರಕಟವಾಗಿರುತ್ತದೆ. ಪ್ರಸ್ತುತ,ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು : ಅನಂತ ನೆನಪು

ಎಸ್ತರ್‌ ಅನಂತಮೂರ್ತಿ