ನವಕರ್ನಾಟಕ ನಿರ್ಮಾಣದ ಆದಿ ಪುರುಷ, ನಾಡು ನುಡಿಗಳ ಪ್ರಗತಿಗಾಗಿ ಹೋರಾಡಿದ ಪ್ರಥಮ ಕನ್ನಡಿಗ ಡೆಪ್ಯೂಟಿ ಚನ್ನಬಸಪ್ಪ. ಅವರು ಬೆಳಗಾವಿ ಜಿಲ್ಲೆಯ ಡೆಪ್ಯೂಟಿ ಎಜುಕೇಶನಲ್ ಇನ್ಸ್ಪೆಕ್ಟರ್ ಆಗಿ, ಧಾರವಾಡ ಜಿಲ್ಲಾ ಡೆಪ್ಯೂಟಿ ಎಜುಕೇಶನಲ್ ಇನ್ಸ್ಪೆಕ್ಟರ್ ಆಗಿ, ಕನ್ನಡ ವಿದ್ಯಾಭ್ಯಾಸವು ಬಹುಮುಖ್ಯವಾಗಿ ಪ್ರಸಾರವಾಗಲು ಕಾರಣರಾದರು. 1833 ನವೆಂಬರ್ 1 ರಂದು ಧಾರವಡದಲ್ಲಿ ಜನಿಸಿದ ಅವರು 1856ರ ಫೆಬ್ರವರಿ ತಿಂಗಳಲ್ಲಿ 'ನಾರ್ಮಲ್ ಕ್ಲಾಸ್' ಎಂಬ ಸಂಸ್ಥೆಯು ಮುಖ್ಯಸ್ಥರಾಗಿ ನೇಮಕವಾದರು.
ಮುಂಬಯಿ ಕರ್ನಾಟಕದಲ್ಲಿ ನಶಿಸಿ ಹೋಗಬಹುದಾಗಿದ್ದ ಕನ್ನಡ ಭಾಷೆಯನ್ನು ಬೆಳಗುವಂತೆ ಮಾಡಿದ ಮಹಾಕೀರ್ತಿಯು ಇವರಿಗೆ ಸಲ್ಲುತ್ತದೆ. ಬೆಳಗಾವಿಯಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಒಂದು ವಿದ್ಯಾರ್ಥಿ ನಿಲಯವನ್ನು ತೆರೆದಿದ್ದ ಅವರು ಶಿಕ್ಷಣವಲ್ಲದೆ ತತ್ವಜ್ಞಾನದಲ್ಲಿಯೂ ಆಸಕ್ತಿಯುಳ್ಳವರಾಗಿದ್ದರು. 1 ಮೇ 1865ರಲ್ಲಿ 'ಜೀವನ ಶಿಕ್ಷಣ' ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿ, ಅದರ ಪ್ರಥಮ ಸಂಪಾದಕರಾಗಿ ಕನ್ನಡ ಪತ್ರಿಕಾ ವ್ಯವಸಾಯಕ್ಕೆ ಭದ್ರ ಬುನಾದಿ ಹಾಕಿದರು. ಗಳಗನಾಥರು, ಸಿಂಪಿ ಲಿಂಗಣ್ಣ, ಶಾಂತಕವಿಗಳು, ಮುಂತಾದವರು ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. 1981 ಅವರ ಹೆಸರಿಲ್ಲಿ ’ಡೆಪ್ಯೂಟಿ ಚನ್ನಬಸಪ್ಪ ಶಿಕ್ಷಣ ಪ್ರತಿಷ್ಠಾನ’ವೆಂಬ ಸಂಸ್ಥೆಯೂ ಆರಂಭವಾಗಿದೆ. ಅವರು 1881 ಜನವರಿ 4 ರಂದು ನಿಧನರಾದರು.