ಡಿ.ಎಸ್. ಕರ್ಕಿ ಎಂದೇ ಪ್ರಸಿದ್ಧರಾಗಿದ್ದ ಲೇಖಕ ದುಂಡಪ್ಪ ಸಿದ್ದಪ್ಪ ಕರ್ಕಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ. ತಂದೆ- ಸಿದ್ದಪ್ಪ, ತಾಯಿ- ದುಂಡವ್ವ. ಪ್ರಾರಂಭಿಕ ಶಿಕ್ಷಣವನ್ನು ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಪದವಿ ಪಡೆದರು. ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿ ಜೊತೆಗೆ ಪ್ರೊ. ಕೆ.ಜಿ.ಕುಂದಣಗಾರರ ಮಾರ್ಗದರ್ಶನದಲ್ಲಿ ‘ಕನ್ನಡ ಛಂದಸ್ಸಿನ ವಿಕಾಸ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿಯನ್ನು ಪಡೆದರು. ಬಿ.ಟಿ. ಪದವಿ ಪಡೆದ ನಂತರ ಬೆಳಗಾವಿ, ಕಾರವಾರಗಳಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಆನಂತರ ಬೆಳಗಾವಿ ಲಿಂಗರಾಜ ಕಾಲೇಜಿನ ಟೀಚಿಂಗ್ ಡಿಪ್ಲೊಮ ವಿಭಾಗದ ಮುಖ್ಯಸ್ಥರಾಗಿ, ಬೆಳಗಾವಿಯಿಂದ ಹುಬ್ಬಳ್ಳಿಗೆ ಬಂದು ಕಾಡು ಸಿದ್ಧೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು. ಅವರ ಮೊದಲ ಕವನ ಸಂಕಲನ ‘ನಕ್ಷತ್ರಗಾನ’ 1949ರಲ್ಲಿ ಪ್ರಕಟವಾಗಿದೆ. ನಾಡಿನ ಹಲವಾರು ರಮಣೀಯ ತೀರ್ಥಕ್ಷೇತ್ರಗಳ ವರ್ಣನೆಯ ಅವರ ಕವನ ಸಂಗ್ರಹ ಭಾವತೀರ್ಥ. ಮಹಾತ್ಮಗಾಂಧಿಯವರಿಗೆ ಸಲ್ಲಿಸಿದ ಕಾವ್ಯ ಶ್ರದ್ಧಾಂಜಲಿಯು ‘ಗೀತ ಗೌರವ’ ಎಂಬ ಕವನ ಸಂಕಲನದಲ್ಲಿ ಸೇರ್ಪಡೆಯಾಗಿದೆ. ನಾಡಿನ ಮಹಾನ್ ವ್ಯಕ್ತಿಗಳ ಕುರಿತಾದ ಕವನಗಳು ‘ಕರಿಕೆ-ಕಣಗಲು’ ಕವನ ಸಂಗ್ರಹದಲ್ಲಿ ಪ್ರಕಟವಾಗಿದೆ. ಕರಿಕೆ ಡಿ.ಎಸ್. ಕರ್ಕಿ ಅವರ ಮನೆತನದ ಹೆಸರಾದರೆ ಕಣಗಲು ಅವರ ಶ್ರೀಮತಿಯವರ ಮನೆತನದ ಹೆಸರು. ಎರಡು ಮನೆತನಗಳ ಅರ್ಥಪೂರ್ಣ ಕವನ ಸಂಕಲನ ಇದಾಗಿದೆ. ಮಕ್ಕಳ ಸಾಹಿತ್ಯ-ತನನತೋಂ, ಬಣ್ಣದ ಚೆಂಡು ಕವನ ಸಂಕಲನಗಳು. ‘ಕನ್ನಡ ಛಂದೋವಿಕಾಸ’ ಇವರ ಪಿಎಚ್.ಡಿ. ಮಹಾಪ್ರಬಂಧವೂ ಪ್ರಕಟವಾಗಿವೆ. ಬದುಕನ್ನು ಹಲವಾರು ಕೋನಗಳಿಂದ ನೋಡಿ ಬರೆದ ಲೇಖನಗಳ ‘ನಾಲ್ದೆಸೆಯ ನೋಟ’ ಅತ್ಯುತ್ತಮ ಪ್ರಬಂಧ ಕೃತಿಯಾಗಿದೆ. ಇವರ ಕತಾಸಂಕಲನ- ಜೀವನ ಪ್ರಕೃತಿ. ಅನುವಾದ-ಬೇಜುಬರುವಾ. 1970ರಲ್ಲಿ ಫ್ರಾನ್ಸ್, ರಶಿಯಾ ಮುಂತಾದ ದೇಶಗಳಿಗೆ ಭಾರತ ಸರಕಾರದ ಸಾಂಸ್ಕೃತಿಕ ರಾಯಭಾರಿಯಾಗಿ ಭೇಟಿ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ 1972ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಟಿ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸದಸ್ಯತ್ವ, 1968ರಲ್ಲಿ ಹುಬ್ಬಳ್ಳಿ ನಾಗರಿಕರಿಂದ ಷಷ್ಟಬ್ದಿ ಸಮಾರಂಭ, ‘ಕಾವ್ಯರ್ಷಿ’ ಗೌರವ ಗ್ರಂಥ ಮತ್ತು 1991ರಲ್ಲಿ ‘ಕಾವ್ಯಗೌರವ’ ಗ್ರಂಥವನ್ನು ಗೌರವಾರ್ಥವಾಗಿ ಅರ್ಪಿಸಲಾಗಿದೆ.