ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು. ತತ್ವಶಾಸ್ತ್ರ-ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು.
ನವ್ಯೋತ್ತರ ಸಾಹಿತ್ಯದ ಕಾವ್ಯ ಕಟ್ಟೋಣಕ್ಕೆ ಮಾದರಿಯಂತಹ ಕಾವ್ಯ ರಚನೆ ತಾಳ್ಯರ ವಿಶೇಷತೆ. ನನ್ನ ಕಣ್ಣಗಲಕ್ಕೆ, ಸಿಂಧೂ ನದಿಯ ದಂಡೆಯ ಮೇಲೆ, ಎಲ್ಲಿ ನವಿಲು ಹೇಳಿರೇ, ಸುಡುವ ಭೂಮಿ, ಕಾವಳದ ಸಂಜೆಯಲ್ಲಿ, ಮೌನಮಾತಿನ ಸದ್ದು ತಾಳ್ಯರ ಕವನ ಸಂಕಲನಗಳು. ಪ್ರಭು ಅಲ್ಲಮ, ನೆಲವ ಹುಡುಕಿ ಗದ್ಯ, ಅಲ್ಲಮ ನಾಟಕ, ರಾಮಕೃಷ್ಣ ಮತ್ತು ಅವರ ಕಾಲ, ಗಾಂಧಿ ಹೋದರು: ನಮಗೆ ದಿಕ್ಕು ತೋರುವವರು ಯಾರು- ಅನುವಾದಿತ ಕೃತಿಗಳು. ಒಟ್ಟು 14 ಕೃತಿಗಳನ್ನು ರಚಿಸಿದ್ದು, ಆರ್ಯಭಟ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ.