ಪ್ರೊ. ಬೆಳ್ಳೆ ಮೋನಪ್ಪ ಹೆಗ್ಡೆ ಅಥವಾ ಬಿ. ಎಂ. ಹೆಗ್ಡೆ ಅವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆದು ವೈದ್ಯ ವೃತ್ತಿಯಲ್ಲಿ ಹೃದಯ ತಜ್ಞರಾಗಿ ಹೆಸರಾದವರು. ಇವರು ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಾ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದ್ದಾರೆ. ಭಾರತೀಯ ವೈದ್ಯ ಸಂಘದಿಂದ ಕೊಡಲ್ಪಡುವ ಪ್ರತಿಷ್ಠಿತ ʻಪ್ರಖ್ಯಾತ ವೈದ್ಯ ಪ್ರಶಸ್ತಿʼಗೆ ಪಾತ್ರರಾದ ಇವರು ಬರಹಗಾರರು ಕೂಡ. ವಿಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ಹವ್ಯಾಸವನ್ನಿಟ್ಟುಕೊಂಡಿರುವ ಇವರು, ಆರೋಗ್ಯ ಮತ್ತು ಭಾಷಣ ಕಲೆಯ ಕುರಿತಾಗಿ ಬರೆದ ಅನೇಕ ಪುಸ್ತಕಗಳು ಇಂದು ಜನಪ್ರಿಯಗೊಂಡಿವೆ. ಹೆಗ್ಡೆ ಅವರು ಹಲವು ವರ್ಷಗಳ ಕಾಲ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಉನ್ನತ ಹುದ್ದೆಯಲ್ಲಿ ದುಡಿದು, ಮಣಿಪಾಲದ ಪ್ರತಿಷ್ಠಿತ 'ಮಾಹೆ' ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನಿವೃತ್ತರಾಗಿದ್ದಾರೆ. ಇವರನ್ನು ʻಹೃದಯವಂತ ಹೃದಯತಜ್ಞʼ ಎಂದು ಕರೆಯಲಾಗುತ್ತದೆ.