ಯೋ.ಬರತ್ ಕುಮಾರ್ ಮಯ್ಸೂರಿನಲ್ಲಿ ಹುಟ್ಟಿ ಬೆಳೆದು ಬಿ.ಇ. ಪದವಿಯನ್ನು ಪಡೆದರು. ಹಲವು ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ಹೆಸರಾಂತ ನುಡಿಯರಿಗ ಡಿ.ಎನ್.ಶಂಕರಬಟ್ಟರೊಡನೆ ಸೇರಿ ’ಇಂಗ್ಲಿಶ್-ಕನ್ನಡ ಪದನೆರಕೆ’ (೨೦೧೫), ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು (೨೦೧೭) ಎಂಬ ಹೊತ್ತಗೆಗಳನ್ನು ಹೊರತಂದರು. ೨೦೧೮ರಲ್ಲಿ ’ಹೊಸಗಾಲದ ಸೂಳ್ನುಡಿಗಳು’ ಎಂಬ ಹೊತ್ತಗೆಯನ್ನು ಬರೆದು ಹೊರತಂದಿದ್ದಾರೆ. ಈಗಾಗಲೆ ಪದ ಕಟ್ಟಣೆಯ ನೆಲೆಯಲ್ಲಿ ಕೆಲಸ ಮಾಡಿದ್ದ ಬರತ್ ಕುಮಾರ್ ಈ ಹೊತ್ತಗೆಯ ಮೂಲಕ ಪದ ಬಳಕೆಯ ನೆಲೆಗೆ ಕಯ್ ಹಾಕಿದ್ದಾರೆ. ಹೆಚ್ಚು ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿಕೊಂಡು ಹೊಸಗಾಲದ ಹೊತ್ತಿಗೆ ತಕ್ಕಂತೆ ಸೂಳ್ನುಡಿಗಳನ್ನು ಕಟ್ಟಲಾಗಿದೆ. ತನ್ನ ಮತ್ತು ತನ್ನ ಸುತ್ತಣವನ್ನು ಅರಿಯುವಾಗ ನಡೆದ ಹುಡುಕಾಟ, ತಲ್ಲಣ ಮತ್ತು ಕಂಡುಕೊಳ್ಳುವಿಕೆಗಳನ್ನು ಇಲ್ಲಿನ ಸೂಳ್ನುಡಿಗಳಲ್ಲಿ ತೆರೆದಿಡಲಾಗಿದೆ. ಈ ಸೂಳ್ನುಡಿಗಳಲ್ಲಿ ಬೆರಗು, ಬೆಡಗು ಮತ್ತು ಬಯಲುಗಳೆಂಬ ಒಳಹರಿವು ಇರುವುದನ್ನು ಗಮನಿಸಬಹುದು.