ಸಂಗೀತಗಾರ, ಕಲಾವಿಮರ್ಶಕ, ಲೇಖಕ ಬಿ.ವಿ.ಕೆ. ಶಾಸ್ತ್ರಿ ಅವರು ಜುಲೈ 30, 1916ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ-ವೆಂಕಟಸುಬ್ಬಯ್ಯ, ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಸಂಗೀತದ ಗೀಳು ಹಿಡಿಸಿಕೊಂಡಿದ್ದ ಶಾಸ್ತ್ರಿಗಳು ಭಜನ ಗೋಷ್ಠಿಯೊಂದರಲ್ಲಿ ಹಾಡಿದ್ದನ್ನು ಕೇಳಿದ ಅವರ ಉಪಾಧ್ಯಾಯ ಸುಬ್ರಹ್ಮಣ್ಯಂ ಎಂಬುವರು ಇವರಿಗೆ ಶಾಸ್ತ್ರೀಯ ಸಂಗೀತ ಕಲಿಯುವಂತೆ ಪ್ರೇರೇಪಿಸಿದರು. ಮುಂದೆ ಮೈಸೂರಿಗೆ ಬಂದ ಶಾಸ್ತ್ರಿಗಳಿಗೆ ಆಸ್ಥಾನ ವಿದ್ವಾಂಸ ಚಿಕ್ಕರಾಮರಾಯರಲ್ಲಿ ಕ್ರಮಬದ್ಧ ಪಾಠವಾಯಿತು. ಆ ನಂತರ ಮೈಸೂರಿನ ಜಯಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟಿನಿಂದ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದು ಅದರಲ್ಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದಿದ್ದ ಶಾಸ್ತ್ರಿಗಳು ,ತಮ್ಮೊಳಗಿನ ಸೃಜನಶೀಲ ತುಡಿತಗಳಿಂದ ಸಂಗೀತ ವಿಮರ್ಶಕರಾಗಿ ರೂಪುಗೊಂಡರು. ಅಲ್ಲದೇ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೈಸೂರಿನ ‘ಸಾಧ್ವಿ’ ಪತ್ರಿಕೆಯ ಸಂಪಾದಕ ಅಗರಂ ರಂಗಯ್ಯನವರು ಜೈಲು ಸೇರಿದಾಗ ಶಾಸ್ತ್ರಿಗಳು ಆ ಪತ್ರಿಕೆಯ ಹೊಣೆ ನಿರ್ವಹಿಸಿದರು.
ಮುಂದೆ, ಇ.ಆರ್. ಸೇತೂರಾಂ ಅವರಿಂದ ಪ್ರಜಾವಾಣಿಗೆ ಕಲಾವಿಮರ್ಶೆ ಬರೆಯಲು ಆಹ್ವಾನ ಪಡೆದರು. ನೃತ್ಯ, ಸಂಗೀತ, ಕಲೆಯ ಬಗ್ಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ, ಜನಪ್ರಗತಿ, ಪ್ರಬುದ್ಧ ಕರ್ನಾಟಕ, ಇಲಸ್ಟ್ರೇಟೆಡ್ ವೀಕ್ಲಿ ಮುಂತಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ.
ಮುರಳಿ ಕಾವ್ಯನಾಮದಲ್ಲಿ ಪತ್ರಿಕೆಗಳಿಗೆ ಅವರು ಬರೆದ ಅನೇಕ ವಿಮರ್ಶಾ ಲೇಖನಗಳು, ಕರ್ನಾಟಕದ ಸಂಗೀತ ವಿದ್ವಾಂಸರ ಸಿದ್ಧಿ-ಸಾಧನೆಗಳ ಕುರಿತಾದ ಲೇಖನಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದವು. ಕರ್ನಾಟಕ ಗಾನಕಲಾ ಪರಿಷತ್ತಿನ ಆರಂಭದ ದಿನಗಳಿಂದಲೂ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದ ಶಾಸ್ತ್ರಿಗಳದ್ದು, ಆ ಸಂಸ್ಥೆಯ ಬೆಳವಣಿಗೆಯಲ್ಲಿ ಹಿರಿಯ ಪಾತ್ರವೆನಿಸಿದೆ. ದೇಶ-ವಿದೇಶಗಳ ಸಾಂಸ್ಕೃತಿಕ ಉತ್ಸವ ಸಮಿತಿಗಳಲ್ಲಿ ನಾಮಾಂಕಿತರಾಗಿ ಶ್ರಮಿಸಿದ ಶಾಸ್ತ್ರಿಗಳು, 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯ ಅಂಗವಾಗಿ ಏರ್ಪಡಿಸಿದ್ದ ಅಖಿಲ ಭಾರತೀಯ ಸಾಂಸ್ಕೃತಿಕ ಉತ್ಸವ ‘ದಾಕ್ಷಿಣಿ’ಯ ದಕ್ಷ ಸಮನ್ವಯಕಾರರಾಗಿ ಅಪಾರ ಪ್ರಶಂಸೆಗೆ ಪಾತ್ರರಾದರು.
ಇಂತಹ ಎಲ್ಲ ಚಟುವಟಿಕೆಗಳ ಮೂಲಕ ಅರ್ಹ ಕಲಾವಿದರಿಗೆ ಸಲ್ಲಬೇಕಾದ ಮನ್ನಣೆ, ಸ್ಥಾನಗಳನ್ನು ದೊರಕಿಸಿಕೊಡಲು ಅವರು ಮಾಡಿದ ಯಶಸ್ವೀ ಪ್ರಯತ್ನಗಳು ಅವಿಸ್ಮರಣೀಯವೆನಿಸಿವೆ. ಕಲೆ ಸಾಹಿತ್ಯ ಲೋಕದ ಸಾಧನೆಗಾಗಿ ಆಕಾಶವಾಣಿ ವಾರ್ಷಿಕ ಪುರಸ್ಕಾರ, ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನಾಧ್ಯಕ್ಷರಾಗಿ ಪಡೆದ ಸಂಗೀತ ಕಲಾರತ್ನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಪುರಸ್ಕಾರ, ಮದ್ರಾಸಿನ ಮ್ಯೂಸಿಕ್ ಅಕಾಡೆಮಿ ಕೊಡಮಾಡಿದ ಟಿ.ಟಿ.ಕೆ.ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಕಡೆಮಿ ಪ್ರಶಸ್ತಿ, ದೆಹಲಿಯ ಲಲಿತಕಲಾ ಅಕಾಡೆಮಿಯಿಂದ ರೀಜನಲ್ ಕ್ರಿಟಿಕ್ಸ್ ಅವಾರ್ಡ್, ಮೈಸೂರು ಟಿ.ಚೌಡಯ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಶಾಸ್ತ್ರಿಗಳಿಗೆ ಸಂದಿದ್ದವು. ಇವುಗಳಿಗೆ ಕಿರೀಟ ಪ್ರಾಯವಾದದ್ದು ಅವರ 75ನೇ ಪ್ರಾಯದಲ್ಲಿ ಅಭಿಮಾನಿಗಳು ಆತ್ಮೀಯತೆಯಿಂದ ಅದ್ಧೂರಿಯಾಗಿ ಸನ್ಮಾನಿಸಿ ಸಮರ್ಪಿಸಿದ ಅಭಿನಂದನಾ ಗ್ರಂಥ ‘ಮುರಳಿ ವಾಣಿ’. ತಮ್ಮ ಜೀವನವಿಡೀ ವಿದ್ವತ್ಪೂರ್ಣ ಪ್ರಭೆಯಿಂದ ಪ್ರಕಾಶಿಸುತ್ತಾ ನಿರಂತರವಾಗಿ ಕ್ರಿಯಾಶೀಲರಾಗಿದ್ದ ಬಿ. ವಿ. ಕೆ. ಶಾಸ್ತ್ರಿಗಳು ಸೆಪ್ಟೆಂಬರ್ 22, 2003 ರಂದು ಈ ಲೋಕವನ್ನು ಅಗಲಿದರು.