ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ವರ್ತೂರಿನವರಾದ ಬ.ನ.ಸುಂದರಾವ್ ಅವರ ಕಾವ್ಯನಾಮ-ವನವಿಹಾರಿ. ತಂದೆ ನರಸಿಂಹ ಮೂರ್ತಿ, ತಾಯಿ ವಸಂತ ಲಕ್ಷ್ಮಮ್ಮ. ಇವರ ತಾತ ರಾಮಣ್ಣನವರು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ಪಂಡಿತರು. ವರ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣವನ್ನು ಇಮ್ಮಡಿ ಹಳ್ಳಿಯ ಶಂಕರನಾರಾಯಣದಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು ಮಾಗಡಿಯಲ್ಲಿ , ನ್ಯಾಷನಲ್ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದರು.
ಕೆಲಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದು, ನಂತರ ಮೈಸೂರು ಸರಕಾರದ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಲೆಕ್ಕ ತನಿಖಾಧಿಕಾರಿಯಾಗಿದ್ದರು. ಅಂದಿನ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎನ್. ಕಿಣಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಶಿಕ್ಷಣಗ್ರಂಥ ‘ನಮ್ಮ ವಿದ್ಯಾಭ್ಯಾಸ; ಕೃತಿ ರಚಿಸಿದ್ದಾರೆ. ಈ ಕೃತಿ ಇಂದಿಗೂ ಉಪಾಧ್ಯಾಯರಿಗೆ ಅತ್ಯುತ್ತಮ ಕೈಪಿಡಿಯಾಗಿದೆ. ‘ಬೆಂಗಳೂರು ಇತಿಹಾಸ’ ಗ್ರಂಥ ರಚಿಸಿದ್ದು, ಭಾರತ ಪಾಕ್ ಸಮರ ಇತಿಹಾಸ, ಬಾಂಗ್ಲೋದಯ, ಯುದ್ಧದ ಹಡಗು ಹಾಗೂ ಸೈನಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಗ್ರಾಮ ಜೀವನಕ್ಕೆ ಸಂಬಂಧಿಸಿದಂತೆ ಸುಗ್ಗಿಯ ಕತೆಗಳು, ಯೋಜನೆಯ ಕತೆಗಳನ್ನು ರಚಿಸಿದ್ದಾರೆ. ಜೊತೆಗೆ ಮಕ್ಕಳಿಗಾಗಿ ಬರೆದದ್ದು-ಆಯ್ದ ಐದು ಕಥೆಗಳು, ಮಂತ್ರಿ ಅಪ್ಪಾಜಿ, ಮಾನಿಟರ್ ಮಾಧು, ಜೀವನಚರಿತ್ರೆ-ನರಹರಿ ಶಾಸ್ತ್ರಿಗಳು, ಚ.ವಾಸುದೇವಯ್ಯನವರು, ಕರ್ನಾಟಕ ವೀರಯೋಧರು ಹಾಗೂ ಕಂದನ ಕಹಳೆ, ಸಂಧ್ಯಾವಿಹಾರ-ಇವರ ಕವನ ಸಂಕಲನಗಳು. ಬೆಂಗಳೂರಿನ ಭವ್ಯಕತೆ, ಚಲೋ ಮೈಸೂರು, ಚಲೋ ಹೈದರಾಬಾದ್, ರಸಿಕ ಕವಿ ಜಗನ್ನಾಥ ಸೇರಿದಂತೆ 25ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದ ಅವರು 08-10-1986ರಲ್ಲಿ ನಿಧನರಾದರು.