ಬಳ್ಳಾರಿಯ ಜಿಲ್ಲೆಯ ಹೊಸಪೇಟೆಯ ಅಂಜಲಿ ಬೆಳಗಲ್ ಕಲಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಅಂಜಲಿ ಅವರ ತಂದೆ ಹುಲುಗಪ್ಪ ಬೆಳಗಲ್ ಅವರು ಕೂಲಿಕಾರ ವೃತ್ತಿ ಮಾಡುತ್ತಲೇ ಸಂತ ಶಿಶುನಾಳ ಶರೀಫರ ಅನುಯಾಯಿ ಆಗಿದ್ದರು. ಹುಲುಗಪ್ಪ ಅವರು ಹೆಸರಾಂತ ತೊಗಲು ಬೊಂಬೆಯಾಟ ಕಲಾವಿದ ಬೆಳಗಲ್ ವೀರಣ್ಣನವರ ಅಣ್ಣನ ಮಗ. ಅಂಜಲಿ ಅವರ ತಾಯಿ ಹುಲಿಗೆಮ್ಮ ಗೃಹಿಣಿ, ಹುಲಿಗೆಮ್ಮ ಅವರು ತೊಗಲು ಬೊಂಬೆಯಾಟದ ಮತ್ತೊಬ್ಬ ಕಲಾವಿದ ಯಡ್ರಾಮನಹಳ್ಳಿ ದೊಡ್ಡ ಭರಮಪ್ಪನವರ ಹಿರಿಯ ಮಗಳು. ತಂದೆ ಮತ್ತು ತಾಯಿ ಕಡೆಯಿಂದ ಕಲಾ ಕುಟುಂಬದ ಹಿನ್ನೆಲೆ ಅಂಜಲಿ ಅವರಿಗಿದೆ.
ಕವಿತೆ ಬರೆಯುವುದರಲ್ಲಿ ಆಸಕ್ತರಾಗಿರುವ ಅಂಜಲಿ ಅವರಿಗೆ ಶಂಕರ ಪ್ರಶಸ್ತಿ (2004), ರಾಜ್ಯ ಯುವ ಪ್ರತಿಭಾ ಪುರಸ್ಕಾರ (2009), ಸರ್.ಎಂ.ವಿಶ್ವೇಶ್ವರಯ್ಯ ಕಲಾ ರತ್ನ ಪುರಸ್ಕಾರ (2013), ಕರ್ನಾಟಕ ಭೂಷಣ ಪ್ರಶಸ್ತಿ, ಜವನ ಆಗಮನ ಕವಿತೆಗೆ ಕ.ಲೇ, ಸಂಘದಿಂದ ಪಿ.ವತ್ಸಲಾದೇವಿ ದತ್ತಿ ಪ್ರಶಸ್ತಿ (2015), ಗಜೇಂದ್ರಗಡದ ಚೇತನ ಪ್ರಕಾಶನದ ಚೇತನ ಪ್ರಶಸ್ತಿ (2017), ಮಂಡ್ಯದ ಸಿರಿಗನ್ನಡ ವೇದಿಕೆಯಿಂದ ಕಾವ್ಯಶ್ರೀ ಪ್ರಶಸ್ತಿಗಳು ಅವರಿಗೆ ದೊರೆತಿವೆ.