ಅಂಬಣ್ಣ ಅರೋಲಿಕರ್ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ಆಗಸ್ಟ್ 15 1969 ರಲ್ಲಿ ಜನಿಸಿದರು. ತಂದೆ ಷಣ್ಮುಖಪ್ಪ, ತಾಯಿ ಕೃಷ್ಣಮ್ಮ. ಬಾಲ್ಯದಿಂದಲೂ ಬಡತನದಿಂದ ಹಿನ್ನಲೆಯಲ್ಲಿ ಬಂದದ್ದರಿಂದ 1985ರಿಂದ ವಿದ್ಯಾರ್ಥಿಗಳ, ರೈತಾಪಿ ಜನರ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನೂರಾರು ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ.
ಇಂದಿಗೂ ಅವರು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಬಾಲಕಾರ್ಮಿಕರ ಬಗ್ಗೆ ,ಹೆಣ್ಣು ಮಕ್ಕಳ ಭ್ರೂಣ ಹತ್ಯೆಗಳ ಬಗ್ಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಅಗತ್ಯದ ಕುರಿತು ಹಲವಾರು ಜಾಗೃತಿ ಗೀತೆಗಳನ್ನು ರಚಿಸಿ ಹಾಡುವ ಮೂಲಕ ಮಕ್ಕಳ ಉನ್ನತ ವ್ಯಾಸಂಗ ಹಾಗೂ ಉನ್ನತ ಅಧಿಕಾರ ಪಡೆಯುವುದರ ಬಗ್ಗೆ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ‘ಜನಬಲಟೈಮ್ಸ್' ಎಂಬ ದಿನಪತ್ರಿಕೆಯನ್ನು ಹೊರತರುತ್ತಿದ್ದಾರೆ. ಅವರ ಮೊದಲ ಕೃತಿ ‘ತ್ಯಾಗಜೀವಿ ಜನಾಧಿಕಾರ’ ಕವನ ಸಂಕಲನವು 2019ರಲ್ಲಿ ಪ್ರಕಟಣೆ ಕಂಡಿತು. ಅವರು ರಚಿಸಿದ ಹಾಡುಗಳಾದ ‘ಹೆತ್ತವಳು, ಅಕ್ಷರದವ್ವ’ ಧ್ವನಿಸುರುಳಿ ಮುದ್ರಣಗೊಂಡಿದೆ.