ಅಬ್ದುಲ್ ಹಮೀದ್ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿ 1937 ಏಪ್ರಿಲ್ 15ರಂದು ಜನಿಸಿದರು. ತಂದೆ ಮಹಮದ್ ಬುಡೇನ್ ಸಾಬ್, ತಾಯಿ ಮೆಹಬೂಬ್ ಬೀ. ತಮ್ಮ ಹುಟ್ಟೂರಿನಲ್ಲೇ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿದ ಅವರು ಹೈಸ್ಕೂಲಿಗೆ ತಿಪಟೂರನ್ನು ಅರಸಬೇಕಾಯಿತು. ನಂತರ ಇಂಟರ್ ಮೀಡಿಯೆಟ್‌ಗಾಗಿ ಭೂಪಾಲ್‌ಗೆ ತೆರಳಿ, ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಎಂ.ಎ., ಬಿ.ಎಡ್. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. “ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ” ಅವರ ಪಿಎಚ್.ಡಿ. ಗ್ರಂಥ. ಹಿಂದಿಯಲ್ಲಿ ವಿದ್ವಾನ್ ಪದವಿ ಪಡೆದಿದ್ದಾರೆ. ನಂತರ ಹಿಂದಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು ಹಂದನಕೆರೆಗೆ ಬಂದು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ನಿವೃತ್ತರಾದರು.
ಹಜ್ರತ್ ಬಂದೇ ನವಾಜ, ಸಾಮಾಜಿಕ ಅನಿಷ್ಟಗಳು, ನೆಹರು ಮತ್ತು ಸಂಸದರು, ಸೂಫಿ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ, ಸಿದ್ಧಾಂತ ಶಿಖಾಮಣಿಯಲ್ಲಿ ಸಾರ್ವತ್ರಿಕ ಮೌಲ್ಯಗಳು ಮುಂತಾದವು ಅವರ ಪ್ರಮುಖ ಕೃತಿಗಳು. ಅವರ ಶೈಕ್ಷಣಿಕ ಸಂಶೋಧನೆಗೆ ಎನ್.ಸಿ.ಇ.ಆರ್.ಟಿ. ರಾಷ್ಟ್ರಪ್ರಶಸ್ತಿ, ನೆಹರು ಮತ್ತು ಸಂಸದರು ಹಿಂದಿ ಕೃತಿಗೆ ನೆಹರು ಶತಮಾನೋತ್ಸವ ಪುರಸ್ಕಾರ, ಪಾಣಿಪತ್ ಸಾಹಿತ್ಯ ಅಕಾಡಮಿಯಿಂದ ಆಚಾರ‍್ಯ ಪ್ರಶಸ್ತಿ, ಹರ‍್ಯಾಣದ ಜೈಮಿನಿ ಅಕಾಡಮಿಯಿಂದ ಶತಾಬ್ದಿ ರತ್ನ ಪ್ರಶಸ್ತಿ, ಚಿತ್ರದುರ್ಗದ ಬೃಹನ್ಮಠದಿಂದ ಸಾಹಿತ್ಯ ಭೂಷಣ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯಿಂದ ಸ್ವರ್ಣಜಯಂತಿ ಪ್ರಶಸ್ತಿ, ದೆಹಲಿಯ ಮಾನವ ಸಂಪನ್ಮೂಲ ವಿಕಾಸ ಮಂತ್ರಾಲಯ, ಶ್ರೇಷ್ಠ ಹಿಂದಿ ಲೇಖಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ.