ಲೇಖಕ ಆಕರ್ಷ ಆದಿತ್ಯ ಅವರು ಮೂಲತಃ ಬೆಂಗಳೂರಿನವರು. ಬಿಕಾಂ ಹಾಗೂ ಎಂ.ಬಿ.ಎ ಪದವೀಧರರು. 6 ವರ್ಷ ಕಾಲ ಎ.ಎನ್ ಝೆಡ್ ಬ್ಯಾಂಕ್ ನಲ್ಲಿ ಸೀನಿಯರ್ ಎಚ್. ಆರ್ ಆಗಿ ಸೇವೆ ಸಲ್ಲಿಸಿದರು. 2013 ರಲ್ಲಿ ಚಿತ್ರಲೋಕದ ಕಡೆಗೆ ಮುಖಮಾಡಿ, 2014 ರಲ್ಲಿ ಪ್ಯಾಂಟಲೂನ್ಸ್ ಅರ್ಪಿಸಿದ ‘ಫೇಸ್ ಆಫ್ ಬೆಂಗಳೂರ್ ಟೈಟಲ್’ ತಮ್ಮದಾಗಿಸಿಕೊಂಡರು. ಕನ್ನಡ, ತೆಲುಗು ತಮಿಳು, ಧಾರಾವಾಹಿಗಳಲ್ಲಿ ನಟಿಸಿ ಬಹುಭಾಷಾ ನಟನೆಂದು ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಬೆಳ್ಳಿ ಕಾಲುಂಗುರ, ಗೊಂಬೆಯಾಟವಯ್ಯ, ದುರ್ಗಾ, ಅಮ್ಮ, ಸಪ್ತ ಮಾತೃಕ ಧಾರಾವಾಹಿಗಳಲ್ಲಿ ಹಾಗೂ ಸ್ಟಾರ್ ಸುವರ್ಣದ "ಸಿಂಧೂರ", ಕಸ್ತೂರಿ ವಾಹಿನಿಯ "ಮಮತೆಯ ಕರೆಯೋಲೆ" ಧಾರಾವಾಹಿಯಲ್ಲಿ ನಾಯಕನಟನಾಗಿ ನಟಿಸಿದ್ದಾರೆ. "ಸ್ಟೆಪ್ ಅಪ್ ಡ್ಯಾನ್ಸ್ ಲ್ಯಾಬ್" ನೃತ್ಯ ಶಾಲೆಯನ್ನು ಬೆಂಗಳೂರಿನ 5 ಮುಖ್ಯ ಬಡಾವಣೆಗಳಲ್ಲಿ ತೆರೆದು, ಸುಮಾರು 10 ವರ್ಷಗಳಿಂದ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾರೆ. ಯೋಗ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಫಿಟ್ನೆಸ್ ನ ಕಾಳಜಿಯ ಜೊತೆಗೆ ಪೌಷ್ಟಿಕಾಂಶ ತಜ್ಞರಾಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡುವುದು ಮತ್ತೊಂದು ವಿಶೇಷ. ಹಾಡುಗಾರಿಕೆ ಹಾಗೂ ಗೀತರಚನೆಯಿಂದ ಸಂಗೀತ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಎರಡು ಆಲ್ಬಮ್ ಗಳನ್ನು ಹೊರ ತಂದಿದ್ದಾರೆ. ಅತಿಥಿ ಕಲಾವಿದರಾಗಿ ತೆರೆ ಮೇಲೆ ಕಾಣಿಸುವುದರ ಜೊತೆಗೆ, ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ವಸ್ತ್ರವಿನ್ಯಾಸದ ಬಗ್ಗೆಯೂ ಆಸಕ್ತಿ ಇದ್ದು, ಕಾಸ್ಟ್ಯೂಮ್ ಪ್ಲ್ಯಾನೆಟ್ ಎಂಬ ಕಾಸ್ಟ್ಯೂಮ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.