ಅಮೃತ ಮಹಾದೇವ ಅಣ್ಣಿಗೇರಿ (ಎ.ಎಂ.ಅಣ್ಣಿಗೇರಿ) ಅವರು ಗದಗ ಜಿಲ್ಲೆಯ ಅಣ್ಣಿಗೇರಿಯವರು. ತಂದೆ ಮಹಾದೇವ ಭಟ್ಟರು, ತಾಯಿ ಅಂಬಾಬಾಯಿ. ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷಣವನ್ನು ಲಕ್ಷ್ಮೇಶ್ವರದಲ್ಲಿ ಪೂರೈಸಿದರು. ಕನ್ನಡ ಹಾಗೂ ಸಂಸ್ಕೃತವನ್ನು ಪ್ರಧಾನವಾಗಿ ಆಯ್ಕೆ ಮಾಡಿಕೊಂಡು 1939ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1940ರಲ್ಲಿ ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿ ಮೂರು ವರ್ಷಗಳವರೆಗೆ ’ರಿಸರ್ಚ್ ಫೇಲೋ’ ಆಗಿ ಸಂಶೋಧನೆಗೆ ತೊಡಗಿದರು. 1943-1953ರವರೆಗೆ ಅಲ್ಲಿ ಸಹಾಯಕ ಸಂಶೋಧಕರಾಗಿ ದುಡಿದು, 1969ರಲ್ಲಿ ನಿವೃತ್ತರಾದರು. 1969-1974ರವರೆಗೆ ಅಣ್ಣಿಗೇರಿಯವರು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದಲ್ಲಿ ಸಹಾಯಕ ಸಂಶೋಧಕರಾಗಿ, 1974-76ರವರೆಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮತ್ತು ವಸ್ತುಸಂಗ್ರಹಾಲಯದ ಕಾರ್ಯನಿರ್ವಾಹಕರಾಗಿದ್ದರು.
ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಸುಮಾರು 31 ಕೃತಿಗಳನ್ನು ರಚಿಸಿದ್ದಾರೆ. 1958ರಲ್ಲಿ ಕರ್ನಾಟಕದ ಹದಿಮೂರು ಮಂದಿ ಇತಿಹಾಸ ಸಂಶೋಧಕರ ಸಂಕ್ಷಿಪ್ತ ಜೀವನ ಚಿತ್ರಗಳನ್ನು ಹೊಂದಿರುವ ‘ಕರ್ನಾಟಕ ಇತಿಹಾಸ ಸಂಶೋಧಕರು’ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬಾದಾಮಿ (1958), ಬನಶಂಕರಿ (1958), ಮಹಾಕೂಟ (1958), ಶಿವಯೋಗ ಮಂದಿರ (1958) ಕುರಿತು ಹದಿನೆಂಟು ಚಿತ್ರಗಳನ್ನೊಳಗೊಂಡ ಕೈಪಿಡಿ ಪ್ರಕಟಗೊಂಡಿದೆ. 1960ರಲ್ಲಿ ಕನ್ನಡ ಸಂಶೋಧನಾ ಸಂಸ್ಥೆಯಿಂದ ಮತ್ತು ಬಾದಾಮಿಯ ಶಿಲ್ಪಕಲೆಯನ್ನು ಕುರಿತ ‘ಪಟ್ಟದಕಲ್ಲು’ ಎಂಬ ಕೃತಿಯು ಪ್ರಕಟವಾಗಿದೆ. 1961ರಲ್ಲಿ ಮೇವುಂಡಿ ಮಲ್ಲಾರಿಯವರೊಂದಿಗೆ ಸಂಪಾದಿಸಿದ ‘ಶಾಸನ ಸಾಹಿತ್ಯ ಪರಿಚಯ’ ಗ್ರಂಥವನ್ನು ಕನ್ನಡ ಸಂಶೋಧನಾ ಸಂಸ್ಥೆ ಪ್ರಕಟಿಸಿದೆ. 1971ರಲ್ಲಿ ಇವರು ಮಾಡಿದ ಉಪನ್ಯಾಸವನ್ನುಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ‘ಪ್ರಾಚೀನ ಭಾರತದ ನಾಣ್ಯಗಳು’ ಹೆಸರಿನಲ್ಲಿ ಪ್ರಕಟಿಸಿದೆ. 1974ರಲ್ಲಿ ’ಐಹೊಳೆ ಸಂಸ್ಕೃತಿ ಮತ್ತು ಕಲೆ’ ಎಂಬ ಕೃತಿಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ನಿರ್ದೇಶನಾಲಯ ಪ್ರಕಟಿಸಿದೆ. 1978ರಲ್ಲಿ ಐ.ಬಿ.ಎಚ್ ಪ್ರಕಾಶನದಿಂದ ‘ಸನ್ನತಿ’ ಎಂಬ ಪುಸ್ತಿಕೆ ಪ್ರಕಟಗೊಂಡಿದೆ.
ಜೆ.ಎಫ್.ಫ್ಲೀಟ್ ’ ಚಿಕ್ಕ ಪುಸ್ತಕವು 1983ರಲ್ಲಿ ಬಿಡುಗಡೆಯಾಗಿದೆ. A Guide to the Kannada Research Institute -Dharwar - 1958, The Descriptive lists of stones and Copper plate Inscriptions(Examined during the year 1940-43) 1961, A Descriptive catalogue of Manuscripts in the Kannada Research Institute- Dharwar , Karnataka Inscriptions vol.IV, Kannada Research Institution- Dharwar ಸೇರಿದಂತೆ ಅನೇಕ ಇಂಗ್ಲಿಷ್ ಕೃತಿಗಳನ್ನು ಶಾಸನಗಳನ್ನೂ ಸಂಪಾದಿಸಿಕೊಟ್ಟಿದ್ದಾರೆ. ಎ.ಎಂ. ಅಣ್ಣಿಗೇರಿಯವರು 27-06-1987ರಂದು ಇಹಲೋಕದಿಂದ ಮರೆಯಾದರು.