ದಕ್ಷಿಣ ಕನ್ನಡದ ಯರ್ಮುಂಜದಲ್ಲಿ ಜನಿಸಿದ (9-2-1933) ಯರ್ಮುಂಜ ರಾಮಚಂಚದ್ರ ಅವರು ತಮ್ಮ 22ನೇ ವಯಸ್ಸಿನಲ್ಲಿಯೇ ತೀರಿಕೊಂಡರು (1955). ಹದಿನೈದನೇ ವಯಸ್ಸಿನಲ್ಲಿಯೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಹೈಸ್ಕೂಲು ಓದಿನ ಆ ದಿನಗಳಲ್ಲಿಯೇ ‘ಬಾಲವಿಕಟ’ ಎಂಬ ಹಸ್ತಪತ್ರಿಕೆಯನ್ನು ಆರಂಭಿಸುವಷ್ಟು ಮಟ್ಟಿಗೆ ಬರವಣಿಗೆಯ ಬಗ್ಗೆ ಆಸಕ್ತರಾಗಿದ್ದರು. ಪ್ರತಿಭವಂತರಾಗಿದ್ದ ಅವರು ಬಳಿಕ ‘ಪಾಂಚಜನ್ಯ’ ಹಸ್ತಪತ್ರಿಕೆಯನ್ನೂ ನಡೆಸಿದರು. ಏಕೋಪಾಧ್ಯಾಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕೆಲ ಕಾಲ ಅಂಚೆ ಕಚೇರಿಯಲ್ಲಿಯೂ ಕೆಲಸ. ತಾಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿಯೂ ದುಡಿಮೆ. ‘ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು’ ಅವರ ಕಥಾಸಂಕಲನ. ಕವನಸಂಕಲನ ‘ವಿದಾಯ’ ಅವರ ಮರಣಾನಂತರ ಪ್ರಕಟವಾಯಿತು.