ಕಾದಂಬರಿಗಾರ್ತಿ, ಕತೆಗಾರ್ತಿ ವಿಜಯಲಕ್ಷ್ಮಿ ಕೆ. ಎಂ. ಅವರು (ಜನನ: 19-07-1949) ದಾವಣಗೆರೆಯವರು. ರಾಷ್ಟಭಾಷಾ ಪ್ರವೀಣ ಪರೀಕ್ಷೆಯನ್ನು ಮುಗಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಾಖಾಧಿಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ತಂದೆ ಕೆ.ಎಂ. ಕೃಷ್ಣಮೂರ್ತಿ, ತಾಯಿ ಗಿರಿಜಮ್ಮ.
`ಸ್ವರ್ಗದ ರೆಕ್ಕೆಗಳು', `ಘಟನೆಗಳು ನಮ್ಮವಲ್ಲ', `ಪರಿವರ್ತನೆ' ಕಾದಂಬರಿಗಳನ್ನು ರಚಿಸಿದ್ದಾರೆ. ‘ಕೆಂಪು ಹೂ’, ‘ಭೇದವಿಲ್ಲದ ಆಸೆಗಳು’, ‘ಪ್ರವಾಹದಲ್ಲಿ ತೇಲುವ ಹೆಣಗಳು’, ‘ಹೊರಬಂದು ಕಲಿಗೆಳತಿ’ ಅವರ ಕತಾ ಸಂಕಲನ. ‘ಉಪಯುಕ್ತ ಕಲಿಕೆ’, ‘ಕರಿ ಚರ್ಮ ಬಿಳಿಯಾಗದು’, ‘ಬಂಗಾರದ ಬೇರುಗಳು’, ‘ಏನಾಗಲಿ ನಾನು’ ಎಂಬ ಮಕ್ಕಳ ಸಾಹಿತ್ಯದ ಕೃತಿಯನ್ನು ರಚನೆ ಮಾಡಿದ್ದಾರೆ. ‘ಸಾವಿನಾಚೆಗೆ’, ‘ಸಮಾನತೆ ನಾಟಕ ಸಾಹಿತ್ಯ’ ಅವರ ನಾಟಕ ಕೃತಿಗಳು.
‘ಎಚ್.ಎಸ್. ಕಾತ್ಯಾಯನಿ, ಎಂ.ಕೆ. ಇಂದಿರಾ, ಎಚ್.ಎಸ್. ಪಾರ್ವತಿ’ ಅವರ ಜೀವನ ಚಿತ್ರಗಳನ್ನು ಬರೆದಿದ್ದಾರೆ. ‘ನಮ್ಮ ಬದುಕು ನಮ್ಮ ಬರಹ , ಮತ್ತು ಸ್ತ್ರೀವಾದ-ಸಾಹಿತ್ಯದ ಒಂದು ಚಳವಳಿ’ ಕೃತಿಗಳನ್ನು ಪ್ರಕಟಿಸಿದ್ದಾರೆ.
‘ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ, ಸುಶೀಲಾ ಪಿ. ಶೆಟ್ಟಿ ಸ್ಮಾರಕ ಕಥಾಪ್ರಶಸ್ತಿ, 'ಹೊರಬಂದು ಕಲಿ ಗೆಳತಿ' ಕಥಾ ಸಂಕಲನಕ್ಕೆ, 'ಸ್ತ್ರೀವಾದ ಸಾಹಿತ್ಯದ ಒಂದು ಚಳವಳಿ' ಲೇಖನ ಸಂಗ್ರಹಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ 3 ಬಾರಿ ಬಹುಮಾನ, ಉತ್ಥಾನ ವಾರ್ಷಿಕ ಸ್ಪರ್ಧೆಯಲ್ಲಿ ಬಹುಮಾನ ಸಂದಿದೆ.