ಉಮಾ ಮುಕುಂದ ಎಂದೇ ಪರಿಚಿತರಾಗಿರುವ ಬಿ.ಎಲ್ ಉಮಾದೇವಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಕೋಲಾರ ಹಾಗು ಬೆಂಗಳೂರಿನಲ್ಲಿ ಹೈಸ್ಕೂಲ್ ವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಬೆಂಗಳೂರಿನ ನಿಜಲಿಂಗಪ್ಪ ಕಾಲೇಜಿನಲ್ಲಿ ಬಿ ಎಸ್ಸಿ ಪದವಿ ಪಡೆದಿದ್ದಾರೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಓದು-ಬರವಣಿಗೆಯ ಹವ್ಯಾಸವಿರುವ ಉಮಾ ಅವರ ಕವಿತೆಗಳು ’ ಅವಧಿ ’ ಮತ್ತು ’ಕೆಂಡಸಂಪಿಗೆ ’ ಅಂತರ್ಜಾಲ ಪತ್ರಿಕೆಗಳು ಹಾಗು ’ಸಂಕಥನ’ ಸಾಹಿತ್ಯಪತ್ರಿಕೆಯಲ್ಲಿ ಪ್ರಕಟವಾಗಿವೆ. ಕೆಲವು ಕವಿತೆಗಳು ತೆಲುಗು ಭಾಷೆಗೂ ಅನುವಾದಗೊಂಡಿವೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಉಮಾ ಅವರು ಕಡೇ ನಾಲ್ಕು ಸಾಲು ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಕೃತಿಗೆ ಹಾಸನದ ’ಮಾಣಿಕ್ಯ ಪ್ರಕಾಶನ ’ ನೀಡುವ ’ 2018 ನೇ ಸಾಲಿನ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ಥಿ ’ ದೊರಕಿದೆ.