ಕನ್ನಡ ಜನಪ್ರಿಯ ಹಾಸ್ಯಸಾಹಿತಿಗಳಲ್ಲೊಬ್ಬರು ತುರುವೇಕೆರೆ ಪ್ರಸಾದ್ ಅವರು. ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ಅವರಾದ ಅವರು ತಮ್ಮ ಹಾಸ್ಯ, ಚುಟುಕುಗಳಿಂದ ತಾಲೂಕಿನಲ್ಲೇ ಮನೆ ಮಾತಾಗಿದ್ದಾರೆ. ಹಲವು ಟಿ.ವಿ. ಧಾರಾವಾಹಿಗಳಿಗೆ ಸಂಭಾಷಣೆ, ಸಾಹಿತ್ಯವನ್ನು ರಚಿಸಿದ್ದಾರೆ. ನಮಸ್ಕಾರ, ವೈಫು ಮತ್ತು ವೆಹಿಕಲ್ಲು, ಅಶ್ವಮೇಧ, ಮಿನಿ ಭಾಮಿನಿಯರ ನಡುವೆ,ಬಿಚ್ಚು ಮಾತು, ಜೋಕು ಜೋಕೆ, ಹಾಲಜ್ಜಿ ಮತ್ತು ಜಾಪಾಳ ಲೇಹ, ಲಘು ಸಿದ್ಧಾಂತ ಕಾ-ಮಿಡಿ, ಟೈಂಪಾಸ್, ಕನಕಲಕ್ಷ್ನಿಯ ಕಂಟ್ರಿ ರೈಡ್(ನಗೆ ಬರಹಗಳ ಸಂಕಲನಗಳು) ಭ್ರಮರ(ಹಾಸ್ಯ ಕಾದಂಬರಿ) ಮುಚ್ಚಿಡದ ಮಾತು(ಅಂಕಣ ಬರಹಗಳು) ಬಾಕ್ಸ್ ಐಟಂ(ಸುದ್ದಿ ತುಣುಕುಗಳು), ಸುತ್ತ ಮುತ್ತ, ಹೆಗಲಿನಿಂದ ಹೆಗಲಿಗೆ ಗಾಂಧಿಗಿರಿ (ಪತ್ರಿಕಾ ಬರಹಗಳು). ಮುಸುಕಿನೊಳಗಿನ ಏಕಾಂತ ಮತ್ತು ಇತರೆ ಪ್ರಬಂಧಗಳು.(ಪ್ರಬಂಧ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಕರ್ಮವೀರ ಪತ್ರಿಕೆಯ ಅವರು ‘ಸವಾಲ್-ಜವಾಬ್’ ಅಂಕಣ ಜನಪ್ರಿಯವೆನಿಸಿದೆ.
ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣರೊಂದಿಗೆ ಅನೇಕ ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ. ಹನುಮಕ್ಕ, ಕ್ಷೀರಸಾಗರ ಮುಂತಾದ ಸಾಕ್ಷ್ಯ ಚಿತ್ರಗಳಿಗೆ ಚಿತ್ರಕತೆ ಸಂಭಾಷಣೆ ರಚಿಸಿದ್ದಾರೆ. ಸದ್ಯ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಅಮೃತ ವರ್ಷಿಣಿಯ ಸಂಭಾಷಣೆ ರಚನೆಯ ಜವಾಬ್ಧಾರಿ ಹೊತ್ತಿದ್ದಾರೆ. ಅವರ ಸಾಹಿತ್ಯ ಸೇವೆಗೆ ಸೇಡಂನ ಅಮ್ಮ ಪ್ರಶಸ್ತಿ, ಬೆಂಗಳೂರಿನ ಅತ್ತಿಮಬ್ಬೆ ಸಾಹಿತ್ಯ ಪುರಸ್ಕಾರ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ( ಎರಡು ಬಾರಿ), ಸ್ನೇಹ ಸೇತು ಪ್ರಶಸ್ತಿ, ಕೇಫ ಸ್ಮಾರಕ ಪ್ರಶಸ್ತಿ, ‘ಬುರುಡೇ ಸ್ವಾಮಿಯ ಇಣುಕು ಚಟ’ ವಿಡಂಬನಾತ್ಮಕ ಲೇಖನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2008ನೇ ಸಾಲಿನ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಪ್ರಶಸ್ತಿ ಮತ್ತು ‘ಕನಕಲಕ್ಷ್ಮಿಯ ಕಂಟ್ರಿ ರೈಡ್’ ಕೃತಿಗೆ ರಾಜ್ಯ ಕಸಾಪದ 2009ನೇ ಸಾಲಿನ ಕುಂಬಾಸ ಪ್ರಶಸ್ತಿ ದೊರಕಿದೆ. 2011ನೇ ಸಾಲಿನ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. `ಕ್ವಾರಂಟೇನ್ ಕ್ವಾಟ್ಲೆ' ಅವರ ಇತ್ತೀಚಿನ ಕೃತಿ.