ತಯಬಅಲಿ ಅ.ಹೊಂಬಳ ಅವರು ಮಕ್ಕಳ ಸಾಹಿತಿ. ಅಪರೂಪದ ವ್ಯಕ್ತಿತ್ವ ಹೊಂದಿರುವ ಅವರು ಕವಿ, ಕಥೆಗಾರ, ಆದರ್ಶವಾದಿಯಾಗಿಯೂ ಪರಿಚಿತರು. ಸರಳ ಸಜ್ಜನಿಕೆ, ವಿನೀತಾಭಾವದ ಇವರು ಕಳೆದ ಎರಡು ದಶಕಗಳಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಬೆರಳಚ್ಚು, ಗಣಕ ಶಿಕ್ಷಕರು. ಕ್ರಿಯಾಶೀಲ ಮನೋಭಾವದ ತಯಬಅಲಿ ಹಲವಾರು ಕಷ್ಟ ಕಾರ್ಪಣ್ಯಗಳ ಮಧ್ಯೆಯೇ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡವರು. ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಜನಿಸಿದ ತಯಬಅಲಿ ಓದುವ ಉತ್ಕಟ ಉದ್ದೇಶದದಿಂದ ಗದುಗಿಗೆ ಬಂದು ನೆಲೆಸಿದರು. ಶಿಕ್ಷಕ ತರಬೇತಿ ಪೂರೈಸಿ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ ಎ.ಎಂ.ಜೆ.ಡಿ ಪದವಿಯನ್ನು ಪಡೆದು ನಂತರ ತಮನೆ ಪ್ರಿಯವಾದ ಬೆರಳಚ್ಚು ಶಿಕ್ಷಕರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಸ್ವಾತಂತ್ರ್ಯ ಮನೋಭಾವದ ತಯಬಅಲಿ ಅಂದಿನ ಟೈಪಿಂಗ್ ಇನ್ ಸ್ಟಿ ಟ್ಯೂಟ್ ಗಳ ಅವಶ್ಯಕತೆಯನ್ನು ಮನಗಂಡು, ಮಸಾರಿಯಲ್ಲಿಯ ಹಾತಲಗೇರಿ ನಾಕಾದಲ್ಲಿ ಕಲ್ಮೇಶ್ವರ ವಾಣಿಜ್ಯ ವಿದ್ಯಾಲಯವನ್ನು ಸ್ಥಾಪಿಸಿದರು. ಅದರಲ್ಲಿ ಶಿಕ್ಷಕರಾಗಿ ಪ್ರಾಚಾರ್ಯರಾಗಿ, ಮಾಲೀಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಟೈಪಿಂಗ್, ಕಂಪ್ಯೂಟರ್ ತರಬೇತಿ ನೀಡುತ್ತಾ ಅವರ ಬದುಕಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಮಕ್ಕಳ ಸಾಹಿತ್ಯದ ಬಗೆಗೆ ಅಪಾರ ಒಲವನ್ನು ಹೊಂದಿರುವ ತಯೂಅಲಿ ಕಥೆಗಳು ಮೂಲಕ ಮಕ್ಕಳಿಗೆ ನೀತಿ ಪಾಠಗಳನ್ನು ಹೇಳಿ ಅವರನ್ನು ನೀತಿವಂತರನ್ನಾಗಿ ಮಾಡಬೇಕೆಂಬ ಸದುದ್ದೇಶದಿಂದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯ ಪಡೆದು 2000ರಲ್ಲಿ ಮಮತೆಯ ಮುತ್ತುಗಳು, 2002 ರಲ್ಲಿ ದೀಪ ಕವನ ಸಂಕಲನ. 2004 ರಲ್ಲಿ ಹನಿಯೊಳಗೆ ಮಕರಂದ ಚುಟುಕು ಸಂಕಲನ. 2006 ರಲ್ಲಿ ಕಥಾಗುಚ್ಛ ಜನನಿ ಜನ್ಮಾದಾತೆ, 2007ರಲ್ಲಿ ಕನ್ನಡ-ಇಂಗ್ಲಿಷ್ ಬೆರಳಚ್ಚು ಕಲಿಕಾ ಪುಸ್ತಕ, 2008ರಲ್ಲಿ ಬೆರಳಚ್ಚು ಕಂಪ್ಯೂಟರ್ ಮಾಲಿಕೆ ಸ್ಪೀಡ್ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಬೆರಳಚ್ಚು ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹಾಗೂ ಪ್ರಾವಿಣ್ಯತೆಯನ್ನು ಪಡೆದಿರುವ ತಯಬಅಲಿಯವರು ಸಂಘಟನಾ ಕ್ಷೇತ್ರದಲ್ಲಿಯೂ ಕ್ರಿಯಾಶೀಲರಾಗಿದ್ದಾರೆ. 2007ರಿಂದ ಇಂದಿನವರೆಗೂ ಗದಗ ಜಿಲ್ಲಾ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಲಯಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಸಂಘವನ್ನು ಯಶಸ್ಸಿನತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ವಿದ್ಯಾರ್ಥಿಗಳ ನೋವು-ನವಿಲುಗಳಿಗೆ ಸ್ಪಂದಿಸುತ್ತಾ, ಬಡಮಕ್ಕಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕದಂಬ ಸೈನ್ಯ ಸಂಘಟನೆ ರಾಜ್ಯೋತ್ಸವದಂದು ಇವರಿಗೆ ಕದಂಬ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.