ಲೇಖಕ ಶಿವಕುಮಾರ ನಾಗವಾರ ಮೂಲತಃ ಬೀದರ ತಾಲೂಕಿನ ಮರಕುಂದಾ ಗ್ರಾಮದ ಮಡಿವಾಳಯ್ಯ ಮತ್ತು ಕಾಶಮ್ಮ ದಂಪತಿಗಳಿಗೆ ದಿನಾಂಕ 12-8-1956ರಲ್ಲಿ ಜನಿಸಿದ್ದಾರೆ. ಎಂ.ಎ. ಡಿ.ಫಾರ್ಮ ಸ್ನಾತಕೋತ್ತರ ಪದವಿ ಪಡೆದು ಬೀದರದ ಕಾಶಿನಾಥರಾವ ಬೆಲೂರೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು 'ಹಣದಿ', 'ಏಳೂರ ಸರಪಂಚ', 'ಮನಸ್ಸು ಮಾತಾಡಿದಾಗ' (ಕಥಾಸಂಕಲನಗಳು) 'ಚೆನ್ನಬಸವಣ್ಣನವರು' (ಚರಿತ್ರೆ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವು ಕತೆಗಳು ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದು ಹೆಸರುವಾಸಿಯಾಗಿವೆ. ಅವುಗಳೆಂದರೆ, 1987 ರಲ್ಲಿ ತರಂಗ ಕಥಾ ಸ್ಪರ್ಧೆಯಲ್ಲಿ ಇವರ 'ಬನ್ಯಾ' ಕತೆ, '1994ರಲ್ಲಿ ಉತ್ಥಾನ ಮಾಸಪತ್ರಿಕೆಯಲ್ಲಿ 'ಹಗಲುಗಳಾಗಿ ರಾತ್ರಿಗಳು' ಮತ್ತು ಅದೆ ಪತ್ರಿಕೆಯು 1996ರಲ್ಲಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ 'ಹುಳುಚು' ಎಂಬ ಕತೆ. ಹಾಗೂ 2002ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯವರ ತಿಂಗಳ ಕಥಾ ಸ್ಪರ್ಧೆಯಲ್ಲಿ 'ಹಡದಿ' ಕತೆ ಇವುಗಳು ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರೆ, 1995ರಲ್ಲಿ ಉತ್ಥಾನ ಮಾಸಪತ್ರಿಕೆಯವರು ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ 'ಬಾಬಡಿ' ಎಂಬ ಕತೆ ದ್ವಿತೀಯ ಬಹುಮಾನ ಪಡೆದುಕೊಂಡಿದೆ. 1988ರಲ್ಲಿ ಪ್ರಜಾವಾಣಿಯ ಕಥಾ ಸ್ಪರ್ಧೆಯಲ್ಲಿ 'ಟುಮ್ಯಾ' ಮತ್ತು 1997ರಲ್ಲಿ 'ನೆಲ ಹಿಡಿಯುವ ಮುನ್ನ' ಕತೆಗಳು ಬಹುಮಾನ ಪಡೆದು ಪ್ರಕಟವಾಗಿವೆ. 1992ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಏರ್ಪಡಿಸಿದ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ 'ಸತ್ಯ' ಕತೆ ಬಹುಮಾನ ಪಡೆದಿದೆ. ಮತ್ತು 2000 ರಲ್ಲಿ ಇವರ 'ಹಣದಿ' ಕಥಾಸಂಕಲನಕ್ಕೆ ಉದಯವಾಣಿ ಪತ್ರಿಕೆಯವರಿಂದ ಪುಸ್ತಕ ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಇವರ 'ಏಳೂರು ಸರಪಂಚ' ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಮನಸ್ಸು 'ಮಾತಾಡಿದಾಗ' ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2003ರಲ್ಲಿ ಇವರ 'ಹಗಲುಗಳಾಗಿ ರಾತ್ರಿಗಳು' ಎಂಬ ಕತೆ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಮತ್ತು 'ಹರಿದ ಕಾಗದದ ಚೂರುಗಳು' ಎಂಬ ಕತೆ ಬಿ.ಬಿ.ಎಂ.ವಿದ್ಯಾರ್ಥಿಗಳಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಠ್ಯ ಪುಸ್ತಕಗಳಾಗಿವೆ. ಮತ್ತು ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. 2014-15ನೇ ಸಾಲಿನ ಪಿ.ಯು.ಸಿ.ದ್ವಿತೀಯ ವರ್ಷದ ಕನ್ನಡ ಪಠ್ಯಕ್ರಮದ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯು ಇವರು 2014ರಿಂದ 2017 ರವರೆಗೆ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ತಮ್ಮ ಹುಟ್ಟೂರಿನಲ್ಲಿ ಚಾಲುಕ್ಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ.