ಶಾಂತಿಗ್ರಾಮ ನಾರಾಯಣಸ್ವಾಮಿ ಲಕ್ಷ್ಮೀನಾರಾಯಣ (ಎಸ್.ಎನ್. ಲಕ್ಷ್ಮೀನಾರಾಯಣ) ಹುಟ್ಟಿದ್ದು ಹಾಸನದಲ್ಲಿ(1957). ಅವಿಭಜಿತ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್(ಕೃಷಿ) ಪದವಿ (1979] ಮತ್ತು ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೊಮಾ ಗಳಿಸಿರುವ ಅವರು ವೈಶ್ಯ ಬ್ಯಾಂಕ್, ಐಎನ್ಜಿ ವೈಶ್ಯ ಬ್ಯಾಂಕಿನಲ್ಲಿ 24 ವರ್ಷಗಳ ಕಾಲ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅವಧಿಗೆ ಮೊದಲೇ ಸೇವೆಯಿಂದ ನಿವೃತ್ತಿ ಪಡೆದು, ಪ್ಲೇಸ್ಮೆಂಟ್ ಕನ್ಸಲೆನ್ಸಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕೃಷಿಗೆ ಸಂಬಂಧಿಸಿದ ವೃತ್ತಿಪರ ಸಲಹಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪದವಿ ವ್ಯಾಸಂಗ ಕಾಲದಲ್ಲಿ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕೃಷಿ ವಿಶ್ವ ವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯ ತಂಡದ ಸದಸ್ಯ. ಒಂದು ಬಾರಿಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆಗಳಲ್ಲಿ ಬೆಂಗಳೂರು ಕೃಷಿ ವಿವಿ ತಂಡದ ಕ್ಯಾಪ್ಟನ್, 1980ರಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಾಂಪಿಯನ್ಶಿಪ್ ಗೆದ್ದ ಅವಿಭಜಿತ ಮೈಸೂರು ವಿಶ್ವವಿದ್ಯಾಲಯ ತಂಡದ ಮತ್ತು ಅದೇ ವರ್ಷ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಅಂತರರಾಜ್ಯ ಬಾಲ್ ಬ್ಯಾಡ್ ಮಿಂಟನ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಕರ್ನಾಟಕ ರಾಜ್ಯ ತಂಡದ ಸದಸ್ಯರಾಗಿದ್ದರು. ಅವಿಭಜಿತ ರೈತಚಳುವಳಿಯಲ್ಲಿ ಭಾಗವಹಿಸಿದ ಅನುಭವವಿರುವ ಲಕ್ಷ್ಮೀನಾರಾಯಣ ಅವರು ರೈತ ಸಂಘದ ವಾರಪತ್ರಿಕೆ 'ನಮ್ಮ ನಾಡು'ವಿಗೆ ಕ್ರೀಡಾ ಅಂಕಣಕಾರನಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಾಮಮನೋಹರ ಲೋಹಿಯಾ, ಡಾ. ಅಬ್ರಾಹಂ ಟಿ.ಕೊವೂ ಅವರ ಮತ್ತು ಇತರೆ ವಿಜ್ಞಾನ ಲೇಖನಗಳನ್ನು ಅನುವಾದಿಸಿದ್ದಾರೆ. ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ 12 ವರ್ಷಗಳ ಕಾಲ ಕಾರ್ಯಕಾರಿ ಸಮಿತಿಯ ಸದಸ್ಯ: ಮತ್ತು 'ಕೃಷಿ ತಂತ್ರಜ್ಞ' ದ್ವಿ-ಭಾಷಾ(ಇಂಗ್ಲೀಷ್-ಕನ್ನಡ) ಮಾಸಪತ್ರಿಕೆಯ ಸಂಪಾದಕನಾಗಿ ಸಹ ಕಾರ್ಯನಿರ್ವಹಿಸಿದ್ದಾರೆ.
ಓದುವುದನ್ನು ಅಪಾರವಾಗಿ ಪ್ರೀತಿಸುವ ಅವರು ಬರಹಕ್ಕೆ ತಡವಾಗಿ ತೆರೆದುಕೊಂಡು ಹಾಸನದ ಜನಪ್ರಿಯ ದಿನಪತ್ರಿಕೆ 2019ರಿಂದ 'ಜನತಾಮಾಧ್ಯಮ' ಕ್ಕೆ ಸತತ 59 ವಾರಗಳ ಕಾಲ 'ಹಾಸನ್-ಮುಖಿ' ಹೆಸರಿನ ಅಂಕಣ ಬರೆದಿದ್ದಾರೆ. ಪ್ರಸ್ತುತ 'ಕೀಟಲೆಯ ದಿನಗಳು' ಪರಿಷ್ಕಾರಗೊಂಡ ಆ ಅಂಕಣದ ಲೇಖನಗಳ ಸಂಗ್ರಹ. ಜೀವನೋಪ ಅವಲವಿಕೆಯನ್ನು ಮೈಗೂಡಿಸಿಕೊಂಡ ಲಕ್ಷ್ಮೀನಾರಾಯಣ ಅವರು ಬದುಕಿನ ಪ್ರತಿಯೊಂದು ಕ್ಷಣವನ್ನು ಆನಂದಿಸುವ ವಿರಳ ವ್ಯಕ್ತಿ, ಅವರ ಮನೋಭಾವ ಮತ್ತು ವ್ಯಕ್ತಿತ್ವದ ಸೊಗಸು ಈ ಕೃತಿಯಲ್ಲಿ ಮೈದಾಳಿದೆ.